ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಡಿ. 20
ವೃತ್ತಿ ಶಿಕ್ಷಣ ಕಾಯ್ದೆ 2006ರ ಜಾರಿ ವಿರೋಧಿಸಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರ ಹೇಳಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಆಶ್ರಯದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಎಬಿವಿಪಿ ಕಾರ್ಯಕರ್ತರು ಮತ್ತು ನಾನಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ, ಬಿ.ಎಂ. ರಸ್ತೆ, ಆರ್.ಸಿ. ರಸ್ತೆ ಮೂಲಕ ಹೇಮಾವತಿ ಪ್ರತಿಮೆವರೆಗೆ ನಡೆಸಿದರು.
ಆರೋಪ: 2006ರ ವೃತ್ತಿ ಶಿಕ್ಷಣ ಕಾಯ್ದೆ ತಿದ್ದುಪಡಿ ಮಾಡಿ ಜಾರಿ ಮಾಡುವ ಸರ್ಕಾರದ ತೀರ್ಮಾನದಿಂದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತೊಂದರೆ ಉಂಟಾಗಲಿದೆ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ ಭರಿಸಿ, ಶಿಕ್ಷಣ ಪಡೆಯಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರ 2006ರ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಕಡಿಮೆ ಶುಲ್ಕದಲ್ಲಿ ಸೀಟು ಇನ್ನಿಲ್ಲ: ಈ ಕಾಯ್ದೆಯಿಂದಾಗಿ ಮುಂದೆ ರಾಜ್ಯದ ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳು ಲಭ್ಯವಾಗುವುದಿಲ್ಲ. ಹಿಂದೆ ಸರ್ಕಾರಿ ಶುಲ್ಕಕ್ಕೆ ಲಭ್ಯವಾಗುತ್ತಿದ್ದ ಸೀಟು ಸಿಗುವುದಿಲ್ಲ. ರಾಜ್ಯದ ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಸರ್ಕಾರ ನೇಮಿಸಲಾದ ಶುಲ್ಕ ಸಂರಚನಾ ಸಮಿತಿ ಅಥವಾ ಶುಲ್ಕ ಮೇಲುಸ್ತುವಾರಿ ಸಮಿತಿ ಶುಲ್ಕ ನಿರ್ಧರಿಸುತ್ತದೆ. ಆದರೆ ಈ ಹಿಂದೆ ಇರುವಂತೆ ರು. 38,00ಗಳಿಗೆ ಸಿಗುತ್ತಿದ್ದ ಸೀಟು ಇನ್ನು ಮುಂದೆ ಬಹುಶಃ ಯಾವ ಕಾಲೇಜಿನಲ್ಲಿಯೂ ಲಭ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನಸಿನ ಮಾತು: ಗುಣಮಟ್ಟದ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಪ್ರವೇಶ ಪಡೆಯ ಬಯಸಿದರೆ ಲಕ್ಷಾಂತರ ರು. ಶುಲ್ಕ ಭರಿಸಬೇಕಾಗುತ್ತದೆ. ಈ ಶುಲ್ಕವನ್ನು ಭರಿಸಲು ಸಾಮಾನ್ಯ ಬಡ, ಮಧ್ಯಮ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಧ್ಯವೇ ಇಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣವಂತೂ ಬಡ, ಮಧ್ಯಮ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕನಸಿನ ಮಾತಾಗಿದೆ. 2006ರ ಕಾಯ್ದೆ ತಿದ್ದುಪಡಿ ಪ್ರಕಾರ ಇನ್ನು ಮುಂದೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಮಾತ್ರ ಸರ್ಕಾರದಿಂದ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಅನ್ವಯಿಸುತ್ತದೆ.
ಜಾಸ್ತಿ ಶುಲ್ಕ: ಉಳಿದ ಕಾಲೇಜುಗಳಿಗೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಯತ್ತದೆ. ಇದರಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸೀಟುಗಳ ಕೊರತೆ ನಿರ್ಮಾಣವಾಗುತ್ತದೆ ಮತ್ತು ಶುಲ್ಕ ಹೆಚ್ಚಳವಾಗುತ್ತದೆ. ಈ ಹಿನ್ನೆಲೆಯಲ್ಲಿ 2006ರ ಕಾಯ್ದೆ ಪ್ರಕಾರ ಪ್ರತಿಯೊಂದು ಕಾಲೇಜಿನ ಮೂಲಸೌಕರ್ಯ ಮತ್ತು ಗುಣಮಟ್ಟ ಆಧರಿಸಿ ಏಕರೂಪದ ಶುಲ್ಕ ಇರುತ್ತದೆ. ಪ್ರತಿಯೊಂದು ಕಾಲೇಜಿಗೂ ಒಂದೊಂದು ರೀತಿಯ ಸಾಮಾನ್ಯ ಶುಲ್ಕವಿರುತ್ತದೆ. ಆ ಶುಲ್ಕ ಈಗ ಜಾರಿಯಲ್ಲಿ ಇರುವ ಸರ್ಕಾರಿ ಸೀಟುಗಳಿಗೆ ಇರುವ ಶುಲ್ಕಕ್ಕಿಂತ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಲಿದೆ.
ಡಿ ಸೀಟುಗಳಿಗೆ ಪ್ರವೇಶ ನೀಡಿ: ವೈದ್ಯಕೀಯ- ದಂತ ವೈದ್ಯಕೀಯ ಸೀಟುಗಂತೂ 8ರಿಂದ 10 ಪಟ್ಟು ಜಾಸ್ತಿ ಶುಲ್ಕ ಇರುತ್ತದೆ. ಈ ಶುಲ್ಕವನ್ನು ಭರಿಸಿ ವೃತ್ತಿ ಶಿಕ್ಷಣ ಪಡೆಯುವುದಂತೂ ಬಡ, ಮಧ್ಯಮ, ಮೇಲ್ಮದ್ಯಮ ಹಾಗೂ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಮಕ್ಕಳಿಗೂ ಈ ಪ್ರಮಾಣದ ಶುಲ್ಕ ಭರಿಸಿ ವೃತ್ತಿ ಶಿಕ್ಷಣ ಪಡೆಯುವುದು ಸಾಧ್ಯವೇ ಇಲ್ಲ. ಖಾಸಗಿ ಕಾಲೇಜುಗಳು ತಮ್ಮ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ಕಾಮೆಡ್-ಕೆ ಮೂಲಕ ಕೇಂದ್ರೀಕೃತ ಕೌನ್ಸಲಿಂಗ್ನ ಡಿ ಸೀಟುಗಳಿಗೆ ಪ್ರವೇಶ ಕಲ್ಪಿಸಬೇಕಿದೆ ಎಂದರು.
ಭಾರೀ ಸ್ಪರ್ಧೆ: ಈ ಕಾಯ್ದೆಯ ಪ್ರಕಾರ, ಎಲ್ಲಾ ಖಾಸಗಿ ಕಾಲೇಜುಗಳ ಪ್ರವೇಶದಲ್ಲಿ ಪರಿಶಿಷ್ಟ ವರ್ಗ ಮತ್ತು ಪಂಗಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ಸೀಟುಗಳು ಮೀಸಲಾಗಿದ್ದರೆ ಶೇ.15 ಸೀಟುಗಳು ಎನ್ಆರ್ಐ ಸೀಟುಗಳೆಂದು ಶೇ.35ರಷ್ಟು ಸೀಟುಗಳು ಅಖಿಲ ಭಾರತ ಮಟ್ಟದಲ್ಲಿ ಮುಕ್ತವಾಗಿ ಕರ್ನಾಟಕ ಸಾಮಾನ್ಯ ವಿದ್ಯಾರ್ಥಿಗಳು ಸೀಟುಗಳನ್ನು ಪಡೆಯಬೇಕಾಗುತ್ತದೆ. ರಾಜ್ಯದ ಸಾಮಾನ್ಯ ವಿರ್ದ್ಯಾಥಿಗಳಿಗೆ ಸೀಟುಗಳು ಲಭ್ಯತೆಯ ಪ್ರಮಾಣ ಕಡಿಮೆಯಾಗಲಿದ್ದು, ಭಾರೀ ಸ್ಪರ್ಧೆಯಲ್ಲಿ, ಭಾರೀ ಮೊತ್ತದ ಶುಲ್ಕಕ್ಕೆ ಪ್ರವೇಶ ಪಡೆಯಲು ಮುಂದಾಗಬೇಕು.
ದುಬಾರಿ ಶುಲ್ಕ: ಇದು ಸಾಮಾನ್ಯ ಬಡ, ಮದ್ಯಮ, ಮೇಲ್ಮಧ್ಯಮ ಹಾಗೂ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಮಕ್ಕಳಿಗೂ ಸಾಧ್ಯವಿಲ್ಲ. ಶುಲ್ಕ ಏಕರೂಪವಾಗಿರುತ್ತದೆ. ರಾಜ್ಯದ ಕಳೆದ ವರ್ಷ ಸಿಇಟಿ ಎಂಜಿನಿಯರಿಂಗ್ ರ್ಯಾಂಕ್ ಪಟ್ಟಿಯ ಮೂಲಕ ಪ್ರಥಮ 500 ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಿಕೊಂಡಿಲ್ಲ.
ಅನುದಾನಿತ ಬಿಎಂಎಸ್ ಕಾಲೇಜು ಹೊರತಾಗಿ ಉಳಿದೆಲ್ಲಾ ಪ್ರತಿಷ್ಠಿತ ಖಾಸಗಿ ಕಾಲೇಜುಗಳೇ ಆಗಿದ್ದು, ಇಲ್ಲಿ ಸೀಟು ಬೇಕಾದರೆ ದುಬಾರಿ ಶುಲ್ಕ ಭರಿಸಬೇಕು.
ಆಗ್ರಹ: ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ವಿದ್ಯಾರ್ಥಿ ವಿರೋದಿ, ಶಿಕ್ಷಣ ವಿರೋಧಿ ಹಾಗೂ ಖಾಸಗಿ ಆಡಳಿತ ಮಂಡಳಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಕೂಡಿರುವ ಈ 2006ರ ವೃತ್ತಿ ಶಿಕ್ಷಣ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಮಾರ್, ನವೀನ್, ಮಂಜುನಾಥ್, ಪ್ರವೀಣ್ ಕುಮಾರ್, ಸಂದೇಶ್, ಕಿರಣ್, ಮೋಹನ್, ಪುರುಷೋತ್ತಮ್, ಸೌಮ್ಯ, ಮಂಗಳು, ಸುಮ, ರಶ್ಮಿ, ಲಾವಣ್ಯ, ಮಂಜುಳ, ಪೂರ್ಣಿಮ, ಸುಷ್ಮಾ, ರೂಪ, ತೇಜಶ್ವಿನಿ, ಕವಿತಾ, ಶೃತಿ, ಶ್ವಾತಿ, ಮಮತ, ಕುಮಾರಿ, ಕಾವ್ಯ, ಸುಜಾತ, ಕವನ, ಚಂಪಾ ಹಾಗೂ ಇತರರು ಇದ್ದರು.