ಆಹಾರ ಭದ್ರತೆ ಕಾಯ್ದೆ ಅಂಗವಾಗಿ ಜಾಥಾ
ಹಾಸನ: ಆಹಾರ ಭದ್ರತೆ ಕಾಯ್ದೆ ಅನ್ವಯ ಬಡ ಕುಟುಂಬಗಳಿಗೆ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ಸರ್ಕಾರ ನಿಗದಿಪಡಿಸಿದ ದರ ಹಾಗೂ ಪ್ರಮಾಣದಲ್ಲಿ ಅರ್ಹ ಬಡ ಕುಟುಂಬದವರು ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಈ ಕಾಯ್ದೆ ಅನ್ವಯವಾಗುವುದು ಎಂದು ಹುಲಿಕಲ್ ಗ್ರಾಮ ಪಂಚಾಯ್ತಿ ಸದಸ್ಯ ಸತೀಶ್ ತಿಳಿಸಿದರು.
ಕೇಂದ್ರ ಕ್ಷೇತ್ರ ಪ್ರಸಾರ ನಿರ್ದೇಶನಾಲಯ, ಆಹಾರ ಇಲಾಖೆ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಅರಕಲಗೂಡು, ಗ್ರಾಮ ಪಂಚಾಯ್ತಿ ಹುಲಿಕಲ್, ಅರಕಲಗೂಡು ತಾಲ್ಲೂಕು ಇವರುಗಳ ಆಶ್ರಯದಲ್ಲಿ ಅರಕಲಗೂಡು ತಾಲೂಕಿನ ಹುಲಿಕಲ್ ಗ್ರಾಮ ಪಂಚಾಯ್ತಿಯ ಸಂಭಾಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಆಹಾರ ಭದ್ರತೆ ಕಾಯ್ದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರೂ ಹಸಿವೆಯಿಂದ ಬಳಲಬಾರದೆಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಅರ್ಹರು ಪಡೆದುಕೊಳ್ಳಬೇಕೆಂದರು.
ಹುಲಿಕಲ್ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳ ವಿವರವಾಗಿ ತಿಳಿಸಿದರಲ್ಲದೆ ಸರ್ಕಾರದ ಈ ಯೋಜನೆಗಳನ್ನು ಅರ್ಹರು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಸಹಕಾರಿ: ತಾಲೂಕು ಆರೋಗ್ಯ ಅಧಿಕಾರಿ ಡಾ. ಸ್ವಾಮಿಗೌಡ ಮಾತನಾಡಿ, ಈ ಕಾಯ್ದೆಯು ಬಡಜನರಿಗೆ ಉಪಯೋಗವಾಗಿದ್ದು, ಹಿಂದಿಗಿಂತಲೂ ಇಂದು ಪೌಷ್ಠಿಕಯುಕ್ತ ಆಹಾರ ಧಾನ್ಯಗಳನ್ನು ಸರ್ಕಾರವೇ ಪಡಿತರ ಮೂಲಕ ನೀಡುತ್ತಿದ್ದು, ಇದು ಬಡವರ ಹಸಿವನ್ನು ನೀಗಿಸುವುದಲ್ಲದೇ ಸಾಮಾಜಿಕ ಸ್ವಾಸ್ಥ್ಯಕ್ಕೂ ಸಹಕಾರಿಯಾಗಿದೆ ಎಂದು ವಿವರಿಸಿದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ದೊರಕುವ ಸೌಲಭ್ಯಗಳನ್ನು ವಿವರವಾಗಿ ತಿಳಿಸಿ, ಅರ್ಹರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಈ ಯೋಜನೆಯಲ್ಲಿ ದೊರಕುವ ಸವಲತ್ತುಗಳನ್ನು ಪಡೆದುಕೊಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ಅರಕಲಗೂಡು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಜರೀನಾ ಭಾನು, ಪಂಚಾಯ್ತಿ ಕಾರ್ಯದರ್ಶಿ ಯಾಲಕ್ಕಿಗೌಡ ಇತರರು ಇದ್ದರು. ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಸ್ವಾಗತಿಸಿ, ಅಕ್ಕಮ್ಮ ವಂದಿಸಿದರು.