ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾರ್ಯಕರ್ತರಿಗೆ ಕಾಮಗಾರಿ ಭಾಗ್ಯ

Vishwanath S
Updated On : 23 Dec 2013, 12:57 pm

ಕನ್ನಡಪ್ರಭ ವಾರ್ತೆ, ಹಾಸನ, ಡಿ.21
ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಬಂಪರ್ ಬಹುಮಾನ ನೀಡಿದೆ. ಇದನ್ನು ಕಾಮಗಾರಿ ಭಾಗ್ಯ ಎನ್ನಬಹುದು. ಕಾರಣ, ರಾಜ್ಯಾದ್ಯಂತ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚಿಸಿ, 5 ಲಕ್ಷವರೆಗಿನ ಕಾಮಗಾರಿಯನ್ನು ಟೆಂಡರ್ ಇಲ್ಲದೇ ನೇರವಾಗಿ ವಿತರಿಸಬಹುದು.
ಇದಕ್ಕೆ ಸಂಬಂಧಪಟ್ಟ ಲಿಖಿತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿ, ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಆಯಾ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ (ಸಿಇಒ) ಸೂಚಿಸಲಾಗಿದೆ.
ಇದಕ್ಕಾಗಿ ಸರ್ಕಾರ 109.01 ಕೋಟಿಗಳನ್ನು ಯೋಜನೇತರ ಲೆಕ್ಕ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದೆ. ಟಾಸ್ಕ್‌ಫೋರ್ಸ್ ಆಯ್ಕೆ ಮಾಡಿದ ರಸ್ತೆಗಳ ಕಾಮಗಾರಿ ಯೋಜನೆಗೆ ಅನುಮೋದನೆ ನೀಡಿ ಜಿಪಂ ಸಿಇಒಗಳು ಅನುಷ್ಠಾನಗೂಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಉಪ ಕಾರ್ಯದರ್ಶಿ ಬೂವನಹಳ್ಳಿ ನಾಗರಾಜ್ ಆದೇಶಿಸಿದ್ದಾರೆ. (ಆದೇಶ ಸಂಖ್ಯೆ- ಗ್ರಾಅಪ- 209 (3) ಆರ್‌ಆರ್‌ಸಿ -2013).
ಆದೇಶದ ಪ್ರಕಾರ, ಟಾಸ್ಕ್‌ಫೋರ್ಸ್‌ಗೆ ಸ್ಥಳೀಯ ಶಾಸಕರು ಅಧ್ಯಕ್ಷರು, ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರು ಮತ್ತು ತಾಪಂ ಸಿಇಒ ಸದಸ್ಯರು ಹಾಗೂ ಜಿಪಂ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾರ್ಯದರ್ಶಿ ಆಗಿರುತ್ತಾರೆ.
ಟಾಸ್ಕ್‌ಫೋರ್ಸ್ ಸಮಿತಿಯು ಕ್ಷೇತ್ರವಾರು ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಡಾಂಬರೀಕರಣಗೊಂಡ ರಸ್ತೆಗಳು ಮತ್ತು ಮಣ್ಣಿನ ರಸ್ತೆಗಳ ದುರಸ್ತಿ ನಿರ್ವಹಣೆ ಮತ್ತು ಅವುಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡು, 5 ಲಕ್ಷವರೆಗಿನ ಕಾಮಗಾರಿಯನ್ನು ಕಾರ್ಯಪಡೆಯೇ ನೇರವಾಗಿ ಟೆಂಡರ್ ಇಲ್ಲದೇ ನೀಡಬಹುದು.
ಇದರಿಂದ ಶಾಸಕರ ಹಿಂಬಾಲಕರು ಮತ್ತು ಶಾಸಕರ ಪಕ್ಷದ ಕಾರ್ಯಕರ್ತರಿಗೆ ಅನುಕೂಲವಾಗುತ್ತದೆ ಹೊರತು ಇನ್ನೇನೂ ಆಗುವುದಿಲ್ಲ. ಹೀಗೆ ತಮ್ಮವರಿಗೆ ಕಾಮಗಾರಿ ನೀಡಿದರೆ ಕಾಮಗಾರಿ ಗುಣಮಟ್ಟ ಕಾಪಾಡಲು ಸಾಧ್ಯವೇ ಇಲ್ಲ ಎಂಬ ಟೀಕೆಯೂ ವ್ಯಕ್ತವಾಗಿದೆ.
ಚುನಾವಣೆ ದೃಷ್ಟಿಯೇ?
ಮಂಚ, ಹಾಸಿಗೆ ನೀಡುವ ಶಾದಿ ಭಾಗ್ಯ, ಅನ್ನಭಾಗ್ಯ ಯೋಜನೆಯಂತೆ ಕಾಮಗಾರಿ ಭಾಗ್ಯ ಕೂಡ ಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದಲೇ ಮಾಡಲಾಗಿದೆ.
ಚುನಾವಣೆಯಲ್ಲಿ ಪ್ರಚಾರ ಕಾರ್ಯವನ್ನು ಎದ್ದು ಬಿದ್ದು ಕಾರ್ಯಕರ್ತರು, ಮುಖಂಡರು ಮಾಡಲೆಂದೇ ಕಾಮಗಾರಿ ಭಾಗ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಲಾಗಿದೆ ಎನ್ನುತ್ತಾರೆ ರೈತ ಸಂಘದ ಮುಖಂಡ ಕಣಗಾಲು ಮೂರ್ತಿ.
1 ಕಿಮೀಗೆ ರು. 1 ಲಕ್ಷ
ಒಂದು ಕಿಲೋಮೀಟರ್ ರಸ್ತೆ ದುರಸ್ತಿ ಕಾಮಗಾರಿ ವೆಚ್ಚವನ್ನು 1 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಅದರಂತೆ 5 ಲಕ್ಷ ವೆಚ್ಚದಲ್ಲಿ 5 ಕಿ.ಮೀ ರಸ್ತೆ ದುರಸ್ತಿ ಮಾಡುವ ಕಾಮಗಾರಿಯನ್ನು ಟಾಸ್ಕ್ ಫೋರ್ಸ್ ಟೆಂಡರ್ ಇಲ್ಲದೇ ನೀಡಬಹುದಾಗಿದೆ.
ಟಾಸ್ಕ್‌ಫೋರ್ಸ್  ಬೇಕಾ?
ಈಗಾಗಲೇ ಹತ್ತಾರು ಇಲಾಖೆಗಳ ಮೂಲಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗಿದ್ದ ಮೇಲೆ ಮತ್ತೊಂದು ಟಾಸ್ಕ್ ಫೋರ್ಸ್ ಅವಶ್ಯಕತೆ ಇರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ನಿಗಮ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ, ಲೋಕೋಪಯೋಗಿ ಇಲಾಖೆ, ಜಿಪಂ ಎಂಜಿನಿಯರಿಂಗ್ ವಿಭಾಗ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಎಸ್ ಡಿಸಿಎಲ್), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿ ಎಸ್‌ವೈ), ಕಾವೇರಿ ನೀರಾವರಿ ನಿಗಮ (ಸಿಎನ್ ಎಲ್ ಎಲ್), ನಗರಪಾಲಿಕೆ, ನಗರಸಭೆಗಳಿಂದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)- ಹೀಗೆ ಹಲವಾರು ಇಲಾಖೆಗಳಿಂದ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.
ಇದಕ್ಕಾಗಿ ವಾರ್ಷಿಕ ಸಾವಿರಾರು ಕೋಟಿ ರುಪಾಯಿ ಹಣ ಬಿಡುಗಡೆ ಮಾಡಲಾಗುತ್ತದೆ. ಈಗ ರಸ್ತೆಗಳನ್ನು ಮಾಡುವ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ನಡೆಸುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕಾರ್ಯದಕ್ಷತೆ ಹೆಚ್ಚುವಂತೆ ಮಾಡಿದರೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಕಷ್ಟವಾಗದು. ಹಾಗೆ ಮಾಡದೇ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಕೋಟಿಗಟ್ಟಲೇ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಷ್ಟೇ.


-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement