ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ
ಬೇಲೂರು: ಸರ್ಕಾರದಿಂದ ನೀಡುವ ಉಚಿತ ಸೈಕಲ್ ಯೋಜನೆಯಲ್ಲಿ ಮಕ್ಕಳು ಮತ್ತು ಪೋಷಕರು ಹಾಗೂ ಶಿಕ್ಷಕರು ತೀವ್ರ ಗಮನ ನೀಡಿದಾಗ ಮಾತ್ರ ಉತ್ತಮ ಬಳಕೆ ಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ. ಸುಂದ್ರೇಶ್ ತಿಳಿಸಿದರು.
ಪಟ್ಟಣದ ವಿಶ್ವ ಸಂಯುಕ್ತ ಪದವಿ ಪೂರ್ವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಸೈಕಲ್ ವಿತಹಣೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರೌಢಶಾಲೆ ಮುಕ್ತಾಯವಾಗುವ ತನಕ ಸೈಕಲ್ಗಳನ್ನು ವಿದ್ಯಾರ್ಥಿಗಳು ಬಳಸಬೇಕು. ಈ ದಿಸೆಯಲ್ಲಿ ಸೈಕಲ್ ಕಿಟ್ ಪ್ರತಿ ಶಾಲೆಗೆ ನೀಡಿ ಹೊಣೆಗಾರಿಕೆಯನ್ನು ಶಾಲಾ ದೈಹಿಕ ಶಿಕ್ಷಕರು ನಿರ್ವಹಿಸುತ್ತಾರೆ ಎಂದರು.
ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೇರಿ 1745 ಸೈಕಲ್ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಗಳು ಹಾಜರಿದ್ದರು.
ವೈಜ್ಞಾನಿಕ ಅರಿವು ಕಾರ್ಯಕ್ರಮ
ಜಾವಗಲ್: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಮತ್ತು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಪ್ರದರ್ಶನಾಲಯದ ವತಿಯಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಾನ್ ಪೀಟರ್ ನಡೆಸಿಕೊಟ್ಟರು.
ಉಪಗ್ರಹ ಉಡಾವಣೆ ಕುರಿತು ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಗಣಿತ ಮತ್ತು ಭೌತಶಾಸ್ತ್ರ ಮಾದರಿ ತಯಾರಿಕೆಯಲ್ಲಿ ಪ್ರಾತ್ಯಕ್ಷಿಕೆ ತೋರಿಸಿದರು. ಗಣಿತದಲ್ಲಿ ಪ್ಲೇಟೋನಕ್ಘ್ನಾಕೃತಿಗಳು ಭೌತಶಾಸ್ತ್ರದಲ್ಲಿ ವಿದ್ಯುತ್ ಬಲ್ಬ್ ಬಿಡಿಸಿ ಮೋಟಾರ್ ಮುಂತಾದ ಬಿಡಿಭಾಗಗಳನ್ನು ತಯಾರಿಸುವ ವಿಧಾನವನ್ನು ತೋರಿಸಿದರು.
ಇದೇ ಸಂದರ್ಭದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿ ಹಲವಾರು ವಿದ್ಯಾರ್ಥಿಗಳನ್ನು ಪ್ರಶ್ನೆಗಳನ್ನು ಕೇಳಿ, ವಿಜೇತರಿಗೆ ಬಹುಮಾನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ಯೋಗೀಶ್ ವಹಿಸಿದ್ದರು. ಕಾರ್ಯಕ್ರಮ ಕುರಿತು ಶಿಕ್ಷಕರಾದ ಮರುಳಸಿದ್ದಪ್ಪ ಮತ್ತು ಚಂದ್ರೇಗೌಡ ಮಾತನಾಡಿದರು.
ಎನ್ಎಸ್ಎಸ್ ಶಿಬಿರ
ಅರಕಲಗೂಡು: ಇಲ್ಲಿನ ಬಾಲಕರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಡಿ. 25ರಿಂದ 31ರವರೆಗೆ ಜರುಗಲಿದೆ. ತಾಲೂಕಿನ ಅಂಕನಾಯಕನಹಳ್ಳಿ ಗ್ರಾಮದಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, ಬುಧವಾರ ಮಧ್ಯಾಹ್ನ 2 ಗಂಟೆಗೆ ಶಾಸಕ ಎ. ಮಂಜು ಅವರು ಶಿಬಿರವನ್ನು ಉದ್ಘಾಟಿಸುವರು. ಪ್ರತಿದಿನ ಸಂಜೆ 4 ಗಂಟೆಗೆ ಜಾನುವಾರು ತಪಾಸಣಾ ಶಿಬಿರ ಮತ್ತು ಉಪನ್ಯಾಸ, ಹೆಚ್.ಐ.ವಿ ಸೋಂಕು ತಡೆಗಟ್ಟುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳು ಜರುಗಲಿವೆ ಎಂದು ಶಿಬಿರಾಧಿಕಾರಿ ಸಿ.ವಿ. ಶಾಂತರಾಜು ತಿಳಿಸಿದ್ದಾರೆ.
ಛಾಯಾಚಿತ್ರ ಪ್ರದರ್ಶನ
ಹಾಸನ: ರಾಷ್ಟ್ರೀಯ ಚಾಲುಕ್ಯ ಉತ್ಸವದ ಅಂಗವಾಗಿ ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಾದಾಮಿ ಚಾಲುಕ್ಯರ ಸ್ಮಾರಕ ಮತ್ತು ಭೂಪ್ರದೇಶದ ಕುರಿತು ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆಯೆಂದು ರಾಷ್ಟ್ರೀಯ ಚಾಲುಕ್ಯ ಉತ್ಸವ ಸಮಿತಿಯ ಅಧ್ಯಕ್ಷ ಮನೋಜ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಢಿಢಿಢಿ.ಝಛಛಟ್ಡ್ಞಣಛ್ಡಡಡಿಛಢ.್ಛ್ಟಟ, ಹಾಗೂ ಮಂಜುನಾಥ ಸುಳ್ಳೊಳ್ಳಿ ಮೊ. 9632511437 ಅವರನ್ನು ಸಂಪರ್ಕಿಸಬಹುದಾಗಿದೆ.
ಭ್ರೂಣ ಪತ್ತೆ ತಡೆಗೆ ತೀರ್ಮಾನ
ಹಾಸನ: ಪ್ರಸವ ಪೂರ್ವ ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಲಿಂಗ ಪತ್ತೆ ಕಾರ್ಯದಲ್ಲಿ ತೊಡಗದಂತೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಪಿಸಿ ಮತ್ತು ಪಿ ಎನ್ ಡಿ ಟಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಯಿತು.
ನೋಟಿಸ್ ನೀಡಲು ನಿರ್ಧಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಡಿ.20ರಂದು ನಡೆದ ಜಿಲ್ಲಾ ಮಟ್ಟದ ಪಿಸಿ ಮತ್ತು ಪಿ ಎನ್ ಡಿ ಟಿ ಸಲಹಾ ಸಮಿತಿ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು. ಮಾಸಿಕ ವರದಿ ನೀಡದ ಆಸ್ಪತ್ರೆಗಳಿಗೆ ನೋಟಿಸ್ ನೀಡಲು ನಿರ್ಧರಿಸಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್.ಶ್ಯಾಮಲದೇವಿ, ಜಿಲ್ಲಾ ಮಟ್ಟದ ಪಿಸಿ ಮತ್ತು ಪಿಎನ್ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಿಕಾಂತ್, ಸಮಿತಿಯ ಸದಸ್ಯೆ ಡಾ.ಆರ್.ಎನ್. ರಂಗಲಕ್ಷ್ಮಿ, ನೂರಾನಿ ಮಹಿಳಾ ಸಮಾಜದ ರಿಹಾನಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ದಸಂಸಗೆ ಆಯ್ಕೆ
ಆಲೂರು: ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಭೆಯನ್ನು ಕಳೆದ ಡಿ. 18ರಂದು ಆಲೂರು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತಾಲ್ಲೂಕು ಸಂಘ ಸಮಿತಿ ಪುನಾರಚನೆ ಮಾಡಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾಲ್ಲೂಕು ಸಂಚಾಲಕ ಟಿ.ಕೆ. ದೇವರಾಜು, ತಾಲ್ಲೂಕು ಸಂಘಟನಾ ಸಂಚಾಲಕ ಚಂದ್ರಪ್ರಸಾದ್ ಮೇರ್ವೆ, ತಾಲ್ಲೂಕು ಸಂಘಟನಾ ಸಂಚಾಲಕ ಹನುಮಯ್ಯ ನೇರಗಳಲೆ, ತಾಲ್ಲೂಕು ಸಂಘಟನಾ ಸಂಚಾಲಕ ಮುರುಳಿ ಕಾರ್ಜುವಳ್ಳಿ, ತಾಲ್ಲೂಕು ಸಂಘಟನಾ ಸಂಚಾಲಕ ಎಂ.ಆರ್. ರಂಗಯ್ಯ ಬ್ಯಾಬಾ, ಸಂಘಟನಾ ಸಂಚಾಲಕ ರಂಗಯ್ಯ, ಅಜ್ಜೇನಹಳ್ಳಿ ತಾಲ್ಲೂಕು ಖಜಾಂಚಿ ಜಿ.ಇ. ಬಸವರಾಜು
ಕಾರ್ಯಕಾರಿ ಸಮಿತಿ ಸದಸ್ಯರು: ಎನ್.ಡಿ. ರಾಜಯ್ಯ, ಎನ್.ಡಿ. ಪರಮೇಶ, ವಿ.ಆರ್. ಪುಟ್ಟಯ್ಯ, ಪುಟ್ಟಸ್ವಾಮಿ, ಬಸವಯ್ಯ, ಚಂದ್ರಶೇಖರ, ಹೊನ್ನಪ್ಪ, ಬಾಲಲೋಚನ, ಲೋಕೇಶ ಎ, ಕರಿಯಯ್ಯ.
ಕೊಳದಲ್ಲಿ ಬಿದ್ದು ಯುವತಿ ಸಾವು
ಚನ್ನರಾಯಪಟ್ಟಣ: ಪಟ್ಟಣದ ಕೋಟೆ ರಾಜರಾಜೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ಯುವತಿಯೋರ್ವೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ಕೋಟೆಯಲ್ಲಿರುವ ರಾಜರಾಜೇಶ್ವರಿ ದೇವಾಲಯಕ್ಕೆ ಪೂಜೆಗೆ ಹೋಗಿದ್ದ ಸಂದರ್ಭದಲ್ಲಿ ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ಕಾಲು ತೊಳೆಯಲು ತನ್ನ ಸ್ನೇಹಿತೆಯೊಂದಿಗೆ ಹೋಗಿದ್ದ ಶೃತಿ (18) ಕಾಲು ಜಾರಿ ಕೊಳದಲ್ಲಿ ಬಿದ್ದು ಮೃತಪಟ್ಟಿದ್ದಾಳೆ.
ಮೃತ ಯುವತಿ ಶೃತಿ, ಕೊಡಗು ಜಿಲ್ಲೆಯ ಪಿರಯಾಪಟ್ಟಣ ತಾಲೂಕು ಚನ್ನಕನ್ನ ಕಾವಲಿನ ಗ್ರಾಮದವಳಾಗಿದ್ದು, ಈಕೆ ಪಟ್ಟಣದ ನಾಗೇಶ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆ ಭಾನುವಾರ ತನ್ನ ಪಕ್ಕದ ಮನೆಯ ಸ್ನೇಹಿತೆ ಪ್ರಿಯಾಂಕ ಜತೆ ಪೂಜೆಗೆಂದು ರಾಜರಾಜೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.