ಅಕ್ರಮ ಕಲ್ಲು ಗಣಿಕಾರಿಕೆ ನಿಲ್ಲಿಸಬೇಕು: ವಿಜಯಕುಮಾರ್
ಹಾಸನ: ಅವಧಿ ಮುಗಿದಿದ್ದರೂ ಶಾಸಕ ಶಿವಲಿಂಗೇಗೌಡರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ಎಎಸ್ಐಪಿ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆದಾರರು ರಸ್ತೆ ಕಾಮಗಾರಿಗೆ ಜಲ್ಲಿ ಕಲ್ಲನ್ನು ಉಪಯೋಗಿಸಬೇಕಾಗಿದೆ. ಆದರೆ ಕ್ಷೇತ್ರ ಶಾಸಕ ಈ ಜಲ್ಲಿ ಕಲ್ಲನ್ನು ಬೇರೆ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಗ್ರಾಮದಲ್ಲಿ ಕಲ್ಲನ್ನು ತೆಗೆಯುವುದಕ್ಕೆ ನಿಗದಿಪಡಿಸಿದ ದಿನಾಂಕ ಮುಗಿದಿದ್ದರು ಸಹ ಜಲ್ಲಿ ಕಲ್ಲನ್ನು ತೆಗೆಯಲಾಗುತ್ತಿದೆ. ಶಾಸಕರು ನಿಯಮಗಳನ್ನು ಪಾಲಿಸದೇ ತಮ್ಮ ಇತರೆ ಕಾಮಗಾರಿಗಳಿಗೆ ಜಲ್ಲಿ ಕಲ್ಲನ್ನು ಬಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಜಮೀನಿನ ಕೃಷಿ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲಿ ಜಲ್ಲಿ ಕ್ರಷರಿಂಗ್ ಮಾಡುವ ಧೂಳು ಅಕ್ಕಪಕ್ಕದ ಜಮೀನಿನಗೆ ಬರುವುದರಿಂದ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದರು. ಬಳ್ಳಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಈಗ ಅರಸೀಕೆರೆಯು ಮಿನಿ ಬಳ್ಳಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಕೆಯನ್ನು ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.