ಅಲ್ಪಸಂಖ್ಯಾತರಿಗೆ ಜೆಡಿಎಸ್ ಕೊಡುಗೆ ಏನು?
ಕ.ಪ್ರ.ವಾರ್ತೆ ಹಾಸನ ಡಿ 24
ಕಾಂಗ್ರೆಸ್ ಅಲ್ಪಸಂಖ್ಯಾತರ ವಿರೋಧಿ, ಇವರಿಂದ ಮುಸ್ಲಿಂರಿಗೆ ದ್ರೋಹವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ಹಾಸ್ಯಸ್ಪದವಾಗಿದ್ದು, ಜೆಡಿಎಸ್ನವರು ಅಲ್ಪಸಂಖ್ಯಾತರಿಗೆ ನೀಡಿರುವ ಕೊಡುಗೆಯಾದರೂ ಏನು ಎಂದು ಮುಸ್ಲಿಂ ಹಿತರಕ್ಷಣಾ ವೇದಿಕೆ ಸಂಚಾಲಕ ಮುಬ್ಬಶಿರ್ ಅಹಮದ್ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಏಳಿಗೆಗೆ ಜೆಡಿಎಸ್ ಮಾತ್ರ ಶ್ರಮಿಸುತ್ತಿದ್ದು, ಕಾಂಗ್ರೆಸ್ ವಿರೋಧಿಯಾಗಿದೆ ಎಂದು ಬೆಂಗಳೂರಿನಲ್ಲಿ ನಡೆದ ಸ್ವಯಂ ಘೋಷಿತ ಅಲ್ಪಸಂಖ್ಯಾತರ ಸಭೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಮುಸ್ಲಿಂರನ್ನು ಕೇವಲ ಮತಬ್ಯಾಂಕ್ಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ದೇವೇಗೌಡರು ಆರೋಪ ಮಾಡಿರುವುದು ಖಂಡನೀಯ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಹಮದ್ ಆರೋಪಿಸಿದರು.
ದೇವೇಗೌಡರು ಇತರೆ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಜಿಲ್ಲೆಯಲ್ಲಿ ಇರುವ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. 1991ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಸಹಕಾರದಿಂದ ಗೆದ್ದ ನಂತರ ಅಲ್ಲಿಂದ ಈಚೆಗೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿರುವ ದೇವೇಗೌಡರು ಹಾಗೂ ಅವರ ಕುಟುಂಬದ ಸದಸ್ಯರು ಪ್ರಸ್ತುತ ಈ ಸಮುದಾಯದ ಬಗ್ಗೆ ಮಾತನಾಡುತ್ತಿರುವುದು ಸರಿ ಇಲ್ಲ ಎಂದರು.
ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಸಿದ್ದಯ್ಯನಗರ, ಪೆನ್ಷನ್ಮೊಹಲ್ಲಾ, ಆದರ್ಶ ನಗರ, ಚಿಪ್ಪಿನಕಟ್ಟೆ, ಚಿಕ್ಕನಾಳು, ರಾಜ್ಕುಮಾರ್ ನಗರದ ಸೇರಿದಂತೆ ನಗರದ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಮುಸ್ಲಿಂರು ಮೂಲಭೂತ ಸಮಸ್ಯೆಗಳಾದ ಒಳಚರಂಡಿ, ಕುಡಿಯುವ ನೀರು, ಸುಸಜ್ಜಿತ ಆಸ್ಪತ್ರೆಗಳು, ಉತ್ತಮ ವಿದ್ಯುತ್ ಸಂಪರ್ಕ, ಸಮರ್ಪಕ ರಸ್ತೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್, ಆಟದ ಮೈದಾನ, ಪಾರ್ಕ್ ಇಲ್ಲದೆ ದಿನ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಿಂದ ಯಾವೊಬ್ಬ ಮುಸ್ಲಿಂ ಮುಖಂಡರಿಗೂ ವಿಧಾನಪರಿಷತ್ ಸದಸ್ಯರನ್ನಾಗಿ, ರಾಜ್ಯಸಭಾ ಸದಸ್ಯರನ್ನಾಗಿ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಹಾಗಾಗಿ ಪ್ರಸ್ತುತ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ರಫೀಕ್ ದರ್ಬಾರ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಜಿಲ್ಲೆಯಲ್ಲಿ 20 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮಾಡಿಲ್ಲ.
ಪೆನ್ಷನ್ಮೊಹಲ್ಲಾ ಹಾಗೂ ಹುಣಸಿನಕೆರೆ ಬಡಾವಣೆಗಳಲ್ಲಿ ಮುಸ್ಲಿಮರೇ ಹೆಚ್ಚಾಗಿ ವಾಸಿಸುತ್ತಿದ್ದು, ಆ ಭಾಗದಲ್ಲಿ ಇದುವರೆಗೂ ಒಂದು ರಾಷ್ಟ್ರೀಕತ ಬ್ಯಾಂಕ್ ಇಲ್ಲದಿರುವುದು ವಿಷಾದನೀಯ.
ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಪಾರ್ಕ್ಗಳಿಲ್ಲದೇ ಈ ಬಡಾವಣೆಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂದು ಟೀಕಿಸಿದರು.
ಮುಸ್ಲಿಂ ಹಿತರಕ್ಷಣಾ ವೇದಿಕೆ ಮುಖಂಡರಾದ ಆರೀಫ್ ಪಾಶ, ಅಬ್ದುಲ್ ಸಮೀರ್, ಅಬ್ದುಲ್ ಖಯಮ್, ಜುಲ್ಫಿಕರ್ ಇದ್ದರು.