ಆಲೂರು ತಾಲೂಕು ಕಸಾಪ ಶ್ರದ್ಧಾಂಜಲಿ
ಆಲೂರು: ಮಹಾನ್ ಚೇತನ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಚ್. ಗುಲಾಂ ಸತ್ತಾರ್ ತಿಳಿಸಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡದ ಪ್ರಭಾವಿ ಶಾಲಿ ಅಧ್ಯಾಪಕರ ಪರಂಪರೆಗೆ ಸೇರಿದ ಜಿ.ಎಸ್. ಶಿವರುದ್ರಪ್ಪರವರು ಪ್ರಾಚೀನ, ಹಾಗೂ ಆಧುನಿಕ ಕನ್ನಡ ಕಾವ್ಯ, ಪಾಶ್ಚಾತ್ಯ ಮಹಾಕಾವ್ಯ, ಇಂಗ್ಲಿಷ್ ರೋಮ್ಯಾಂಟಿಕ್ ಕಾವ್ಯ, ಐರೋಪ್ಯ ನವ್ಯ ಕಾವ್ಯ, ತೌಲನಿಕ ಕಾವ್ಯ ಮೀಮಾಂಸೆ ಅವರು ಪಾಠ ಹೇಳಿದ ಮುಖ್ಯ ವಲಯಗಳಾಗಿದ್ದು, 40 ವರ್ಷಗಳಿಂದ ಕಾವ್ಯ ರಚನೆ ಮಾಡಿದ್ದ ಅವರು ಸಮಕಾಲೀನ ಕಾವ್ಯವನ್ನು ಚರ್ಚಿಸುವಾಗ ಅವರನ್ನು ಸಮನ್ವಯ ಕವಿ ಎಂದೇ ಗುರುತಿಸುತ್ತಿದ್ದರು. ಅಂತಹ ಮಹಾನ್ ಕವಿಯನ್ನು ಕಳೆದುಕೊಂಡ ನಾವೇ ದುರ್ಭಾಗ್ಯರು ಎಂದರು. ಪ್ರಧಾನ ಕಾರ್ಯದರ್ಶಿ ಎ.ಟಿ. ಮಲ್ಲೇಶ್ ಮಾತನಾಡಿ ಶಿವರುದ್ರಪ್ಪ ನವರ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಭಾವಗೀತೆಗಳನ್ನು ಕೇಳುತ್ತಿದ್ದರೆ ಪ್ರಪಂಚವನ್ನೇ ಮರೆತ ಅನುಭವವಾಗುತಿತ್ತು ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಪೃಥ್ವಿ, ಗೋಪಾಲಕೃಷ್ಣ, ಧರ್ಮ, ಸಿದ್ದೇಗೌಡ ಇದ್ದರು.