ಒಕ್ಕಲಿಗರ ಸಂಘದ ಚುನಾವಣೆ: ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ
ಹಾಸನ: ಜ.5 ರಂದು ನಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳಾದ ಶಾಸಕ ಸಿ.ಎನ್.ಬಾಲಕೃಷ್ಣ, ಕಾರ್ಲೆ ಇಂದ್ರೇಶ್ ಹಾಗೂ ಮಂಜೇಗೌಡರು ನಗರದ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ಮಂಗಳವಾರ ಪೂಜೆ ಸಲ್ಲಿಸಿ ನಂತರ ಪ್ರಚಾರ ಕಾರ್ಯ ಪ್ರಾರಂಭಿಸಿದರು. ಬಾಲಕೃಷ್ಣ ಮಾತನಾಡಿ, ಹಿಂದೆ ತಾವು ಒಕ್ಕಲಿಗರ ಸಂಘದ ನಿರ್ದೇಶಕರಾಗುವ ಮುನ್ನ ರಾಜ್ಯದಲ್ಲಿ ಕೇವಲ 25 ಸಾವಿರ ಮತದಾರರಿದ್ದರು. ಇದೀಗ ಆ ಸಂಖ್ಯೆ 3 ಲಕ್ಷ ದಾಟಿದೆ. ಸಂಘದ ಹೆಸರಿನಲ್ಲಿ ಸಂಗ್ರಹವಾದ 33 ಕೋಟಿ ರು. ಠೇವಣಿ ಇಟ್ಟು, ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು. ಶ್ರೀ ಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸಿ ಅವರ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವೇ ಹೊರತು ಕೇವಲ ಹಣ ಬಲದಿಂದ ಅಲ್ಲ ಎಂದರು. ಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ಒಕ್ಕಲಿಗರ ಮಹಿಳಾ ವಿದ್ಯಾರ್ಥಿ ನಿಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.ಈಗಾಗಲೇ ಹಾಸನ ಸೇರಿದಂತೆ 4 ಕಡೆ ಮಹಿಳಾ ಹಾಸ್ಟೆಲ್ಗಳಿಗೆ 18 ಕೋಟಿ ರು.ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು. ಹಾಸನದಲ್ಲಿ ಮಹಿಳಾ ಕಾಲೇಜು ಕಟ್ಟಲು ನಿವೇಶನ ಕೊಡಿಸಲು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ, ಸ್ಥಳೀಯ ಶಾಸಕ ಎಚ್.ಎಸ್.ಪ್ರಕಾಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಸಹಕಾರ ನೀಡಿದ್ದಾರೆ ಎಂದರು. ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಭಿಮಾಣಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಇತರರು ಭಾಗವಹಿಸಿದ್ದರು.