ಜಕಣಾಚಾರಿ ಕಾಲ್ಪನಿಕ ವ್ಯಕ್ತಿಯಲ್ಲ: ಅರೇಮಾದನಹಳ್ಳಿ ಮಠದ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಹಾಸನ ಡಿ. 24
ಅಮರ ಶಿಲ್ಪಿ ಜಕಣಾಚಾರಿ ಅವರನ್ನು ಕಾಲ್ಪನಿಕ ವ್ಯಕ್ತಿ ಎಂದು ಬಿಂಬಿಸುವ ದುಷ್ಕೃತ್ಯ ನಡೆಯುತ್ತಿದ್ದು, ಅವರು ಕಾಲ್ಪನಿಕ ವ್ಯಕ್ತಿ ಅನ್ನೋದು ಸತ್ಯಕ್ಕೆ ದೂರವಾದುದು ಎಂದು ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಶ್ರೀಶಿವಸುಜ್ಞಾನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಾಡಿನಾದ್ಯಂತ ಜಕಣಾಚಾರ್ಯರು ನಿರ್ಮಿಸಿರುವ 600ಕ್ಕೂ ಹೆಚ್ಚು ದೇವಾಲಯಗಳಿವೆ. ಬೇಲೂರು, ಹಳೇಬೀಡು, ಕೈದಾಳ, ಸೋಮನಾಥಪುರ ಹಾಗೂ ಮುಂತಾದ ದೇವಾಲಯಗಳು ಜಕಣಾಚಾರ್ಯರ ಶಿಲ್ಪಕೃತಿಗೆ ಜೀವಂತ ಸಾಕ್ಷಿಯಾಗಿ ನಿಂತಿವೆ. ಜಕಣಾಚಾರಿ ಹೆಸರು ಯಾವ ದೇವಾಲಯಗಳಲ್ಲಿ ಇಲ್ಲ ಶಾಸನಗಳಲ್ಲಿಯೂ ಇಲ್ಲ ಎನ್ನಲಾಗಿದೆ.
ಆದರೆ ಜಕಣಾಚಾರಿ ಬಗ್ಗೆ ಅನೇಕ ಉಲ್ಲೇಖಗಳು ಸಿಗುತ್ತವೆ. ಅವರು ಜಿಗುಪ್ಸೆಯ ಕಾರಣ ಮನೆಯನ್ನು ತೊರೆದು ಹೊರ ಬಂದರು. ನಂತರು ಅವರು ಅನಾಮಧೇಯವಾಗಿ ನಾಡಿನ ತುಂಬ ದೇವಾಲಯಗಳನ್ನು ನಿರ್ಮಿಸುತ್ತಾರೆ. ತಮ್ಮ ಹೆಸರನ್ನು ಯಾರಿಗೂ ಹೇಳಿಕೊಳ್ಳದೆ ತಮ್ಮ ಹೆಸರನ್ನು ಎಲ್ಲೂ ಕೆತ್ತಿಲ್ಲ ಎಂಬುದು ಸತ್ಯಸಂಗತಿ. ಅವರು ಕೇವಲ ಹೆಸರಿಗಾಗಿ ಶಿಲ್ಪಕಲೆಗಳನ್ನು ಮಾಡಬೇಕು ಎಂಬ ಭಾವನೆ ಅವರಿಗೆ ಇರಲಿಲ್ಲ ಎಂದರು.
ಜಕಣಾಚಾರಿ ವೇದ, ಉಪನಿಷತ್ತು, ಪುರಾಣ, ಆಗಮಗಳು ಶಿಲ್ಪಶಾಸ್ತ್ರ ಇವೇ ಮೊದಲಾದ ಜ್ಞಾನ ಇರುವಂತಹ ಸ್ಥಪತಿಯಾಗಿದ್ದರು. ಅವರ ಕೈಕೆಳಗೆ ನೂರಾರು ಶಿಲ್ಪಿಗಳು ಕೆಲಸ ಮಾಡುತ್ತಿದ್ದರು. ಅಂತಹ ಕೆಲವು ಶಿಲ್ಪಿಗಳು ತಮ್ಮ ಹೆಸರನ್ನು ಕೆತ್ತಿಕೊಂಡಿದ್ದಾರೆ ಅಷ್ಟೇ. ಅಂದ ಮಾತ್ರಕ್ಕೆ ಅವರೇ ದೇವಾಲಯಗಳನ್ನು ಕೆತ್ತಿದ್ದಾರೆ ಅಂತ ಅಲ್ಲ.
ಬೇಲೂರಿನ ಕಪ್ಪೆ ಚೆನ್ನಿಗರಾಯ ದೇವಾಲಯ ಎಲ್ಲರಿಗೂ ತಿಳಿದಿದ್ದು, ಆ ಹೆಸರಿನ ಹಿಂದೆ ದೊಡ್ಡ ಚರಿತ್ರೆ ಇದೆ. ಜಕಣಾಚಾರಿ ಮಗ ಡಂಕಣಚಾರ್ಯರ ಬಂದು ನಿಮ್ಮ ಕೆತ್ತನೆಯಲ್ಲಿ ದೋಷವಿದೆ ಎನ್ನುತ್ತಾನೆ. ತನ್ನ ಮಗ ಎಂದು ಅರಿಯದ ಜಕಣಾಚಾರ್ಯರು ಅದರಲ್ಲಿ ದೋಷವಿದ್ದರೆ ತಮ್ಮ ಕೈಗಳನ್ನು ಕತ್ತರಿಸಿಕೊಳ್ಳುವುದಾಗಿ ಹೇಳುತ್ತಾರೆ.
ನಂತರ ಜಕಣಾಚಾರ್ಯರು ಕೆತ್ತುತ್ತಿದ್ದಂತಹ ಮೂರ್ತಿ ಎಲ್ಲಾ ಕಡೆ ಒಣಗುತ್ತದೆ. ಆದರೆ ನಾಭಿ ಮಾತ್ರ ಒಣಗುವುದಿಲ್ಲ. ಆ ಉಳಿ ಸುತ್ತಿಗೆ ಹಿಡಿದು ಒಡೆಯುತ್ತಾರೆ. ಆಗ ನೀರು, ಮರಳು ಮತ್ತು ಕಪ್ಪೆ ಹಾರಿ ಬರುತ್ತದೆ. ಆಗ ಜಕಣಾಚಾರ್ಯರು ತಮ್ಮ ಕೈಗಳನ್ನು ಕತ್ತರಿಸಿಕೊಳ್ಳುತ್ತಾರೆ. ಆ ಬಾಲಕನ ಪ್ರಾವೀಣ್ಯತೆಯ ಬಗ್ಗೆ ರಾಮಾನುಜಚಾರ್ಯರು ಕೇಳಿದಾಗ ಆ ಬಾಲಕ ತಾನು ಜಕಣಾಚಾರ್ಯರ ಪುತ್ರ ಎನ್ನುತ್ತಾನೆ.
ಅಲ್ಲೇ ಇದ್ದ ಜಕಣಾಚಾರ್ಯರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ನಂತರ ಅವರ ಕೈಗಳಿಗೆ ಔಷಧೋಪಚಾರ ಮಾಡಿ ಮತ್ತೆ ಆವರ ಕೈ ಉಳಿ ಸುತ್ತಿಗೆ ಹಿಡಿಯುವಂತೆ ಮಾಡಲಾಗುತ್ತದೆ. ನಂತರ ತಂದೆ ಜಕಣಾಚಾರ್ಯ ಮತ್ತು ಪುತ್ರ ಡಂಕಣಚಾರ್ಯರ ಒಟ್ಟಿಗೆ ಸೇರಿ ಮೂರ್ತಿ ಕೆತ್ತನೆ ಮಾಡುತ್ತಾರೆ. ಅದೇ ಈಗ ಪ್ರಧಾನ ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹವಾಗಿದೆ. ಇದೇ ಸಾಕ್ಷಿ ಬೇಲೂರಿನ ದೇವಾಲಯದ ನಿರ್ಮಾಣ ಜಕಣಚಾರಿ ಅವರದೇ ಅನ್ನೋದು ಮನದಟ್ಟಾಗುತ್ತದೆ ಎಂದು ವಿವರಿಸಿದರು.
ಜಕಣಾಚಾರಿ ಪ್ರಶಸ್ತಿ ನಿಲ್ಲಿಸಬಾರದು: ಜಕಣಾಚಾರ್ಯರ ಬಗ್ಗೆ ಸಚಿವ ವೀರಪ್ಪಮೋಯ್ಲಿ ಅವರಿಗೆ ತಿಳಿಸಿದಾಗ ಅವರು ಶಿಲ್ಪಕಲಾ ಅಕಾಡೆಮಿಯನ್ನು ಸ್ಥಾಪಿಸಿ ಜಕಣಾಚಾರ್ಯ ಪ್ರಶಸ್ತಿ ನೀಡಲು ಪ್ರಾರಂಭಿಸಿದರು. ಈಗ ಜಕಣಾಚಾರ್ಯರು ಕೇವಲ ಕಾಲ್ಪನಿಕ ವ್ಯಕ್ತಿ ಅನ್ನೋ ರೀತಿಯಲ್ಲಿ ಕೆಲವು ಕಾಣದ ಕೈಗಳು ಬಿಂಬಿಸುತ್ತಿವೆ. ಆದ್ದರಿಂದ ಸರ್ಕಾರ ಈ ಕಾಣದ ಕೈಗಳ ಕೃತ್ಯಕ್ಕೆ ಮಣಿದು ಪ್ರಶಸ್ತಿ ನೀಡುವುದನ್ನು ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದ್ದೇ ಆದಲ್ಲಿ ಕೋಟ್ಯಾಂತರ ಜನ ಸಿಡಿದೇಳಲಿದ್ದಾರೆ ಎಂದು ತಿಳಿಸಿದರು.