ತಂಡಕ್ಕೆ ಬರ ಪರಿಸ್ಥಿತಿ ವಿವರಿಸಿದ ಶಾಸಕ
ಚನ್ನರಾಯಪಟ್ಟಣ: ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿನಲ್ಲಿ ಸಂಚರಿಸಿ ಬರಗಾಲದ ಪರಿಸ್ಥಿತಿಯನ್ನು ವೀಕ್ಷಿಸಿತು. ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳಾದ ಡಾ.ಚಂದ್ರಶೇಖರ್, ಸುನಿತಾ ದಾವ್ಲೆ ಹಾಗೂ ಪಿಜಿಎಸ್ ರಾವ್ ಅವರಿದ್ದ ತಂಡ ತಾಲೂಕಿನ ಬಾಗೂರು ಕಸಬಾ, ನುಗ್ಗೇಹಳ್ಳಿ ಹಿರೀಸಾವೆ ಹೋಬಳಿಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿತು.
ಅರಸೀಕೆರೆಯಿಂದ ಆಗಮಿಸಿದ ತಂಡವನ್ನು ಸ್ವಾಗತಿಸಿದ ಶಾಸಕ ಬಾಲಕೃಷ್ಣ ತಾಲೂಕಿನಲ್ಲಿ ಬರಗಾಲದಿಂದ ಉಂಟಾಗಿರುವ ನಷ್ಟದ ಬಗ್ಗೆ ವಿವರಿಸಿ, ತಾಲೂಕಿನಲ್ಲಿ 161ಕೋಟಿ ತೆಂಗು ಬೆಳೆ, 10ಕೋಟಿ ರಾಗಿ ಬೆಳೆಯಿಂದ ಹಾನಿ ಉಂಟಾಗಿದೆ ಎಂದು ವರದಿ ನೀಡಿದರು. ರಾಜ್ಯ ಸರ್ಕಾರ ಈ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿರುವುದಕ್ಕೆ ಸ್ವಾಗತಿಸಿ ಪ್ರಥಮ ಪಟ್ಟಿಯಲ್ಲಿಯೇ ತಾಲೂಕನ್ನು ಬರಗಾಲ ಪೀಡಿತ ತಾಲೂಕಾಗಿ ಘೋಷಣೆ ಮಾಡಬೇಕಾಗಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ಅಲ್ಪ ಧೋರಣೆ ತೋರಿತು ಎಂದು ತಿಳಿಸಿದರು.
ಕೇಂದ್ರ ಅಧ್ಯಯನ ತಂಡದ ಸುನಿತಾ ದಾವ್ಲೆ ಮಾತನಾಡಿ ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಂಚರಿಸಿ ಇಲ್ಲಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿದ್ದು, ತಾಲೂಕಿನಲ್ಲಿ ನೀರಾವರಿ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿನ ಎಲ್ಲಾ ಕೆರೆಗಳು ಬರಿದಾಗಿದ್ದು, ಇದರಿಂದ ಅಂತರ್ಜಲ ಕುಸಿದಿರುವ ಹಿನ್ನಲೆಯಲ್ಲಿ ಬೋರ್ವೆಲ್ಗಳಲ್ಲಿ ನೀರು ಕಾಣದಾಗಿದೆ.
ರಾಗಿ, ಮೆಕ್ಕೆಜೋಳ, ಹುರುಳಿ ಬೆಳೆಗಳಲ್ಲಿ ನಿರೀಕ್ಷಿತ ಇಳುವರಿಯಿಲ್ಲದ ಕಾರಣ ರೈತರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ಹಾಸನ ಉಪವಿಭಾಗಧಿಕಾರಿ ಶರತ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಪಿ ಸಿಂಗ್, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವರಾಜು, ತೋಟಗಾರಿಕಾ ಇಲಾಕೆ ನಿರ್ದೇಶಕ ಶಕಿಲ್, ತಹಸೀಲ್ದಾರ್ ಡಾ.ನಾಗರಾಜು ಹಾಗೂ ಇತರ ಅಧಿಕಾರಿಗಳು ಇದ್ದರು.