ತಗ್ಗಲೂರಿನ ತೋಟದ ಬಳಿ ಯುವಕನ ಮೇಲೆ ಚಿರತೆ ದಾಳಿ
ಗುಂಡ್ಲುಪೇಟೆ: ತೋಟದ ಮನೆಯ ಬಳಿಯಿದ್ದ ಯುವಕನೊಬ್ಬ ಚಿರತೆ ದಾಳಿಯಿಂದ ತಪ್ಪಿಸಿಕೊಂಡ ಘಟನೆ ತಾಲೂಕಿನ ತಗ್ಗಲೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಹೊರಭಾಗದಲ್ಲಿರುವ ಕನಕಾಂಬರಿ ಮಹದೇವಪ್ಪ ಅವರ ತೋಟದ ಮನೆಯ ಬಳಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಚಿರತೆ ಬಗ್ಗೆ ಆತಂಕಗೊಂಡಿದ್ದಾರೆ.
ಸೋಮವಾರ ರಾತ್ರಿ ತೋಟದ ಮನೆಯ ಬಳಿಯಿರುವ ದನದ ಕೊಟ್ಟಿಗೆಗೆ ಹೋದ ಕನಕಾಂಬರಿ ಮಹದೇವಪ್ಪ ಅವರ ಮಗ ಎನ್.ನಾಗೇಂದ್ರ ದನಕರುಗಳಿಗೆ ಹುಲ್ಲು ಹಾಕಿ ಕೊಟ್ಟಿಗೆಯಿಂದ ಹೊರ ಬಂದಾಗ ಚಿರತೆ ಕಾಣಿಸಿಕೊಂಡಿದೆ.
ಮನೆ ಮುಂದಿದ್ದ ನಾಯಿ ಹಿಡಿಯಲು ಬಂದಿದ್ದ ಚಿರತೆಯು ನಾಗೇಂದ್ರನ ಮೇಲೆ ಎರಗಿದೆ. ನಂತರ ಅದರಿಂದ ತಪ್ಪಿಸಿಕೊಂಡ ನಾಗೇಂದ್ರ ಕೊಟ್ಟಿಗೆ ಒಳಗೆ ಓಡಿ ಬಾಗಿಲು ಹಾಕಿಕೊಂಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆ ವೇಳೆ ಚಿರತೆ ಮನೆ ಮುಂದೆಯಿದ್ದ ನಾಯಿಯನ್ನು ಎತ್ತುಕೊಂಡು ಹೋಯಿತು ಎಂದು ನಾಗೇಂದ್ರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾನೆ. ಬೇಗೂರು ಠಾಣೆ ಪಿಎಸ್ಐ ಬಿ.ಎನ್. ಸಂದೀಪ್ಕುಮಾರ್ ವಿಷಯ ತಿಳಿದು ತೋಟದ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದರು. ನಂತರ ಮನೆಯವರಿಗೆ ಧೈರ್ಯ ಹೇಳಿದರು. ಸೋಮವಾರ ರಾತ್ರಿಯೇ ಅರಣ್ಯಾಧಿಕಾರಿ ಪ್ರಸನ್ನ ಭೇಟಿ ನೀಡಿದ್ದರು.