ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಶು ಸಂಗೋಪನೆ: ಮಹಿಳೆಗೇ ಹೆಚ್ಚಿನ ಆಸಕ್ತಿ

Rashmi Kasaragodu
Updated On : 25 Dec 2013, 1:49 am

ಹೊಳೆನರಸೀಪುರ: ಇಂದಿನ ದಿನಗಳಲ್ಲಿ ಪುರುಷರಿಗಿಂತಲೂ ಮಹಿಳೆಯರು ಪಶುಸಂಗೋಪನೆಯಲ್ಲಿ ಹೆಚ್ಚಿನ ಆಸಕ್ತಿ ತಳೆದಿರುವುದರಿಂದಾಗಿಯೇ ಹಾಲು ಉತ್ಪಾದನೆಯಲ್ಲಿ ಅಧಿಕ ಲಾಭಗಳಿಸಿ, ಅವರ ಕುಟುಂಬ ವರ್ಗವು ಉತ್ತಮ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ನುಡಿದರು.
 ತಾಲೂಕಿನ ಪೂಜೆಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರು ಕಡಿಮೆಯಿಲ್ಲ.
  ಎಲ್ಲರಂತೆ ತಾವೂ ಸಹ ಸಮಾಜದ ಅಭಿವೃದ್ಧಿಗೆ ತಮ್ಮ ಕಾಣಿಕೆಯೂ ಇದೆ ಎಂಬುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಸಾಕ್ಷಿ ಆಗಿದ್ದಾರೆ ಎಂಬುದಕ್ಕೆ ಪಶುಸಂಗೋಪನೆಯಲ್ಲಿ ತೊಡಗಿಸಿಕೊಡಿರುವುದೆ ಸಾಕ್ಷಿ ಆಗಿದೆ ಎಂದು ತಿಳಿಸಿದರು.
 ಪ್ರಸ್ತುತ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತವು ಎರಡನೇ ಸ್ಥಾನಗಳಿಸಿದೆ. ಅದರಂತೆ ರಾಜ್ಯ ಸಹ ಎರಡನೇ ಸ್ಥಾನಗಳಿಸಿದೆ ಎಂದ ಅವರು, ಗ್ರಾಮದಲ್ಲಿ ಹಾಲಿನ ಕೇಂದ್ರ ಆರಂಭಿಸುತ್ತಿದ್ದು ಗ್ರಾಮದಲ್ಲಿನ ಮಹಿಳೆಯರು ತಮ್ಮ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದಲ್ಲಿ ಇದರಲ್ಲಿ ಬರುವ ಆದಾಯದಲ್ಲಿ ಇಂತಿಷ್ಟೆಂದು ಬರುವ ಲಾಭಾಂಶವನ್ನು ಸಂಘದ ಸದಸ್ಯರಿಗೆ ಹಂಚಲಾಗುವುದೆಂದು ಹೇಳಿದರು.
 ಕೆಎಂಎಫ್ ಅಧಿಕಾರಿ ಜಯಪ್ರಕಾಶ್ ಮಾತನಾಡಿ, ಈ ಗ್ರಾಮದಲ್ಲಿ ಇಂದು ಹಾಲು ಶೇಖರಣಾ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು ಇದರಿಂದ ಗ್ರಾಮದಲ್ಲಿನ ಆರ್ಥಿಕ ಸ್ಥಿತಿ ಬಲಗೊಳ್ಳಲು ಸಾಧ್ಯವಾಗಲಿದೆ ಎಂದರು.
 ಗ್ರಾಮದಲ್ಲಿ ಹಸುಗಳಿಗಿಂತ ಎಮ್ಮೆಗಳು ಹೆಚ್ಚಿಗೆ ಇದ್ದು ಹಾಲಿನ ಕೇಂದ್ರಕ್ಕೆ ಈ ಎಮ್ಮೆ ಹಾಲನ್ನು ಸರಬರಾಜು ಮಾಡುವುದರಿಂದ ಸಂಘಕ್ಕೆ ನಷ್ಟವಾಗಲಿದೆ. ಆದ್ದರಿಂದ ಹಾಲಿನ ಕೇಂದ್ರಕ್ಕೆ ಸರಬರಾಜು ಮಾಡಲು ಬೇರೆ ರೀತಿಯ ಎಮ್ಮೆಗಳನ್ನು ಸಾಕುವುದರಿಂದ ಉತ್ತಮ ಹಾಲಿನ ಇಳುವರಿ ದೊರೆತು ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ಗ್ರಾಮದ ರೈತರು ಅಧಿಕ ಹಾಲು ನೀಡುವ ತಳಿಯ ಹಸು ಮತ್ತು ಎಮ್ಮೆಗಳನ್ನು ಸಾಕಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
 ಕೆಎಂಎಫ್ ವಿಸ್ತರಣಾಧಿಕಾರಿ ರಮೇಶ್ ಹಸು ಮತ್ತು ಎಮ್ಮೆಗಳನ್ನು ಸಾಕುವ ವಿಧಾನವನ್ನು ಗ್ರಾಮಸ್ಥರು ಅರಿತರೆ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಹಾಕಲು ಸಾಧ್ಯವಾಗಲಿದೆ ಎಂದರು.
 ಪುರಸಭೆ ಉಪಾಧ್ಯಕ್ಷ ರಘುರಾಂ, ಗ್ರಾಮದ ಮುಖ್ಯಸ್ಥ ರಾಘವೇಂದ್ರ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರಾಜಮ್ಮ ಸೇರಿದಂತೆ ಗ್ರಾಮದ ಮಹಿಳೆಯರು ಇನ್ನೂ ಮೊದಲಾದವರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement