ಬಸ್ - ಕಾರು ಡಿಕ್ಕಿ: ಮೂವರ ದುರ್ಮರಣ
ಬೇಲೂರು: ಖಾಸಗಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸುರಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಬೆಂಗಳೂರಿನ ನಿವಾಸಿಗಳಾದ ತ್ಯಾಗರಾಜ್, ಕಲಾ ಮತ್ತು ವೇದ ಎಂಬುವರೇ ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಮತ್ತಿಬ್ಬರು ತೀವ್ರ ಗಾಯಗೊಂಡಿದ್ದಾರೆ.
ಇವರು ಬೆಂಗಳೂರಿನಿಂದ ಬೇಲೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮತ್ತಿಬ್ಬರನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೀಡಾಕೂಟ: ರಾಷ್ಟ್ರಮಟ್ಟಕ್ಕೆ ಆಯ್ಕೆ
ಹಾಸನ: ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮನಗರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ನಿವೃತ್ತ ಶಿಕ್ಷಕ ಎ. ಎಸ್. ಬಾಲಸುಬ್ರಹ್ಮಣ್ಯ ಹಾಗೂ ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೆ.ಜಿ. ದಾಸೇಗೌಡ ವಿಜೇತರಾಗಿ ಪದಕಗಳನ್ನು ಪಡೆದು, ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಎ.ಎಸ್. ಬಾಲಸುಬ್ರಹ್ಮಣ್ಯ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ, 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ, ಗುಂಡು ಎಸೆತದಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆದು ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ದಾಸೇಗೌಡ ಅವರು ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಇಬ್ಬರೂ ಫೆ. 27 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯುವ 35ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕ ತಂಡದಿಂದ ಆಯ್ಕೆಯಾಗಿದ್ದಾರೆ.
'ಧಾರ್ಮಿಕ ಭಾವನೆ ಹತ್ತಿಕ್ಕುವುದು ಸಲ್ಲ'
ಅರಕಲಗೂಡು: ಮೌಢ್ಯ ಕಂದಾಚಾರಗಳ ಬಗ್ಗೆ ಸರ್ಕಾರ ನಿಷೇಧ ಹೇರಿದರೆ, ತಮ್ಮ ಅಭ್ಯಂತರವಿಲ್ಲ.
ಆದರೆ ಜನರ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಅಖಿಲ ಭಾರತ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವಾಪಟ್ಟಣದ ಬಿ.ಎಸ್.ವಾಗೀಶಪ್ರಸಾದ್ ಅವರುಹೇಳಿದರು.
ತಾಲೂಕಿನ ರಾಮನಾಥಪುರ ಹೋಬಳಿ ಬಸವಾಪಟ್ಟಣ ಷಡ್ಬಾವರಹೀತೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದ ನಂತರ ಮಾತನಾಡಿದರು.
ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಪ್ರಸ್ತಾಪವನ್ನು ಸರ್ಕಾರ ಮೊದಲು ಕೈಬಿಡಬೇಕು ಎಂದು ನುಡಿದರು.
ರಾಜ್ಯದಲ್ಲಿ ಮಠಗಳು, ಚರ್ಚುಗಳು, ಮಸೀದಿಗಳು, ಕೆಲವು ಸಂಘ ಸಂಸ್ಥೆಗಳು ಸರ್ಕಾರ ಮಾಡದಂತಹ ಅನೇಕ ಧಾರ್ಮಿಕ ಕಾರ್ಯಗಳು ಅಲ್ಲದೇ ಅನ್ನದಾಸೋಹ, ಜ್ಞಾನ ದಾಸೋಹ, ವಿದ್ಯಾದಾನ ಮಾಡಿ, ಲಕ್ಷಾಂತರ ಮಕ್ಕಳಿಗೆ ಅನ್ನದಾತರಾಗಿ ಕೆಲಸಗಳನ್ನು ನಡೆಸಿಕೊಂಡು ಮಠಗಳು ಬರುತ್ತಿವೆ ಎಂದು ನುಡಿದರು. ಯಾವುದೋ ಒಂದು ಮಠದವರು ಏನೋ ಮಾಡಿದರೆಂದು, ಇಡೀ ಮಠಗಳನ್ನೇ ಸರ್ಕಾರ ತನ್ನ ವ್ಯಾಪ್ತಿಗೆ ತರುವ ಕ್ರಮ ಸರಿಯಲ್ಲ.
ಅವ್ಯವಹಾರ ನಡೆಸಿದ ಮಠಗಳ ಮೇಲೆ ಕ್ರಮ ಕೈಗೊಳ್ಳಲಿ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಕಾನೂನು ಕಟ್ಟಳೆ ನೆಪದಲ್ಲಿ ಮಠಗಳನ್ನು ನಿಯಂತ್ರಿಸಲು ಹೊರಟರೆ ಒಳ್ಳೆಯದಾಗುವುದಿಲ್ಲ ಎಂದ ಅವರು ಅಭಿಪ್ರಾಯ ಪಟ್ಟರು.
ಸಾಮಾಜಿಕ ಹಾಗೂ ಧಾರ್ಮಿಕವಾಗಿ ಮಠ, ಚರ್ಚ್, ಮಸೀದಿಗಳು ಮಾಡುತ್ತಿರುವ ಸಮಾಜ ಸೇವೆಗೆ ಇನ್ನು ಹೆಚ್ಚಿನ ಸಹಕಾರ ಪ್ರೋತ್ಸಾಹ ನೀಡಲಿ ಎಂದು ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.