ಶಾಸಕರ ಮನೆ ಜೀತದಾಳು ಆಗ್ತೀವಿ: ತಾ. ಯುವ ಕಾಂಗ್ರೆಸ್ ಸವಾಲು
ಕ.ಪ್ರ.ವಾರ್ತೆ ಅರಸೀಕೆರೆ ಡಿ. 24
ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದೇವೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡರು ಹೇಳಿಕೊಳ್ಳುತ್ತಿದ್ದು, ಈ ಬಗ್ಗೆ ಚರ್ಚೆ ನಡೆಸಲು ವೇದಿಕೆ ಸಿದ್ಧಪಡಿಸಲಿ. ಹಾಗೇನಾದರೂ ನಾವು ಉತ್ತಮ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದೇವೆಂದು ಸಾಬೀತುಪಡಿಸಿದರೆ ಅವರ ಮನೆಯ ಜೀತದಾಳುಗಳಾಗಿ ಕೆಲಸ ಮಾಡುತ್ತೀವಿ ಎಂದು ಸವಾಲು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣನಾಯ್ಕನಹಳ್ಳಿ ವಿಜಯಕುಮಾರ್ ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದೀವಿ ಎಂಬುದನ್ನು ಶಾಸಕರು ಸಾಬೀತುಪಡಿಸದಿದ್ದಲ್ಲಿ ತಾವೇನೂ ಮಾಡುತ್ತಾರೆ ಎಂಬುದನ್ನು ಅವರು ಹೇಳಲಿ ಈ ರೀತಿ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕಾರ್ಯವನ್ನು ಕೈಬಿಡಬೇಕೆಂದು ಹೇಳಿದ್ದಾರೆ.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಇದಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಮಾಜಿ ಸಚಿವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ ಅವರಿಗೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಮರೋಪಾದಿ ಕಾರ್ಯನಿರ್ವಹಿಸಿ: ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದು ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಬಡಜನರಿಗೆ ಬರಗಾಲದಿಂದ ನೊಂದವರಿಗೆ ಹಾಗೂ ಕುಡಿಯುವ ನೀರಿಗೆ ಅನ್ಯಾಯವಾಗದಂತೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ವಿನಂತಿಸಿದ್ದಾರೆ. ಹಾಗೇನಾದರೂ ಶಾಸಕರ ಒತ್ತಡಕ್ಕೆ ಮಣಿದು ದುರುಪಯೋಗ ಪಡಿಸಿಕೊಂಡಲ್ಲಿ ನಿಮ್ಮಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.
ಸಮುದಾಯ ಭವನಗಳ ವಿಚಾರದಲ್ಲಿ ಸಮುದಾಯ ಭವನ ನಿರ್ಮಿಸದೆ ಬಹಳ ಸಮುದಾಯ ಭವನಗಳಿಗೆ ಹಣ ಬಿಡುಗಡೆಯಾಗಿರುತ್ತದೆ. ಉದಾಹರಣೆಗೆ ಅಣ್ಣನಾಯ್ಕನಹಳ್ಳಿ ಮೇಗಲ ವಡ್ಡರಹಟ್ಟಿ, ಕೆಳಗಲ ವಡ್ಡರಹಟ್ಟಿ ಹಾಗೂ ಎ.ಕೆ.ಕಾಲೋನಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಹಣ ಬಿಡುಗಡೆಯಾಗಿದ್ದು ಮೇಗಲ ಹಾಗೂ ಕೆಳಗಲ ವಡ್ಡರಹಟ್ಟಿಯಲ್ಲಿ ಮಾತ್ರ ಕಟ್ಟಡ ನಿರ್ಮಾಣವಾಗಿದ್ದು ಎ.ಕೆ.ಕಾಲೋನಿಯಲ್ಲಿ ನಿರ್ಮಾಣವಾಗಿಲ್ಲ. ಇಂತಹ ಅಕ್ರಮಗಳನ್ನು ಪ್ರಶ್ನಿಸಿದರೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆಂಬ ತಪ್ಪು ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆಂದು ದೂರಿದರು.
2ನೇ ಸಲ ಚಾಲನೆ ನೀಡಬೇಕಿತ್ತಾ: 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಈಗಾಗಲೇ ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದ್ದು ಅದನ್ನು ಎರಡನೆಯ ಬಾರಿಗೆ ಚಾಲನೆ ನೀಡುವ ಅಗತ್ಯವಿತ್ತೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಕೈಬಿಟ್ಟು ಕಾಮಗಾರಿಗೆ ಚಾಲನೆ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಉಮಾಶಂಕರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಯೂನಸ್, ನಗರ ಉಪಾಧ್ಯಕ್ಷ ಮಂಜುನಾಥ್, ಗೀಜಿಹಳ್ಳಿ ಓಂಕಾರಪ್ಪ, ಅಗ್ಗುಂದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಜ್ಜಪ್ಪ, ಇತರರು ಇದ್ದರು.