ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಯಂಪ್ರೇರಿತ ಆರ್ಟಿಸಿ ಆಂದೋಲನ- ಜಿಲ್ಲಾಡಳಿತ ತೀರ್ಮಾನ: ಅನ್ಬುಕುಮಾರ್

Rashmi Kasaragodu
Updated On : 25 Dec 2013, 1:47 am

ಕ.ಪ್ರ.ವಾರ್ತೆ   ಹಾಸನ   ಡಿ. 24
ರೈತನಿಗೆ ತನ್ನ ಜಮೀನಿನ ಬಗ್ಗೆ ಭಾವನಾತ್ಮಕ ನಂಟಿರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳ ದಾಖಲೆಗಳಲ್ಲಿರುವ ಸಣ್ಣ ಪುಟ್ಟ ಲೋಪವನ್ನು ಸರಿಪಡಿಸಲು ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ಆರ್ಟಿಸಿ ತಿದ್ದುಪಡಿ ಆಂದೋಲನ ಕೈಗೊಳ್ಳಲು ಮುಂದಾಗಿದೆ.
ಜಿಲ್ಲಾಧಿಕಾರಿಯವರ ವಿಶೇಷ ಕಾಳಜಿಯಿಂದ ಈ ಪ್ರಯತ್ನ ಪ್ರಾರಂಭವಾಗಿದ್ದು, ಅದಕ್ಕಾಗಿ ಪೂರಕ ತಯಾರಿ ನಡೆಸಲು ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿಂದು ಜಿಲ್ಲೆಯ ಉಪವಿಭಾಗಾಧಿಕಾರಿ, ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಸರ್ವೇಯರ್ಗಳಿಗೆ ವಿಶೇಷ ಆರ್ಟಿಸಿ ತಿದ್ದುಪಡಿ ಆಂದೋಲನದ ಉದ್ದೇಶ ಹಾಗೂ ಅನುಕೂಲಗಳ ಬಗ್ಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
6600 ಅರ್ಜಿ ಮಾತ್ರ ವಿಲೇವಾರಿ:  ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಮೂಲಕ ಸ್ವಯಂ ಪ್ರೇರಿತವಾಗಿ ಆರ್ಟಿಸಿ ತಿದ್ದುಪಡಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈವರೆಗೆ ತಿದ್ದುಪಡಿಗೆ ಸ್ವೀಕೃತಿಯಾಗಿರುವ 16 ಸಾವಿರ ಅರ್ಜಿಗಳಲ್ಲಿ 6600 ಅರ್ಜಿಗಳು ಮಾತ್ರ ವಿಲೇವಾರಿ ಮಾಡಲಾಗುವುದು ಬಾಕಿ ಉಳಿದಿದ್ದು 15 ದಿನಗಳೊಳಗೆ ಸರಿಪಡಿಸಬೇಕಿದೆ ಎಂದು ಹೇಳಿದರು.
ರೈತರ ಹಾಗೂ ಸರ್ಕಾರಿ ಆರ್ಟಿಸಿ ಸೇರಿದಂತೆ ಜಿಲ್ಲೆಯ ಸುಮಾರು ಒಂದು ಲಕ್ಷ ಆರ್ಟಿಸಿಗಳ ತಿದ್ದುಪಡಿಯಾಗಬೇಕಿದೆ. ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಮನಸ್ಸು ಮಾಡಿದರೆ ಮುಂದಿನ ಸಂಕ್ರಾಂತಿಯೊಳಗೆ ಅರ್ಧದಷ್ಟು ಅಂದರೆ ಸುಮಾರು 50 ಸಾವಿರ ತಿದ್ದುಪಡಿಗಳನ್ನು ಮಾಡಿ ಮುಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಈಗಾಗಲೇ ಚನ್ನರಾಯಪಟ್ಟಣದಲ್ಲಿ ಆರ್.ಟಿ.ಸಿ.ತಿದ್ದುಪಡಿ ಆಂದೋಲನ ಪ್ರಾರಂಭಿಸಿ ಮೂರು ಹೋಬಳಿಗಳಲ್ಲಿ 4000 ತಿದ್ದುಪಡಿಗಳನ್ನು  ಪೂರ್ಣಗೊಳಿಸಲಾಗಿದೆ. ಜಿಲ್ಲೆಯ ಇತರ ತಾಲ್ಲೂಕುಗಳಲ್ಲೂ ಹೋಬಳಿವಾರು ಈ ಪ್ರಕ್ರಿಯೆ ಪ್ರಾರಂಭಿಸಿ ಮುಕ್ತಾಯಗೊಳಿಸಲಾಗುವುದು.
ಜಿಲ್ಲಾಡಳಿತವೇ ಸ್ವಯಂ ಪ್ರೇರಿತವಾಗಿ ಆರ್ಟಿಸಿ ತಿದ್ದುಪಡಿ ನಡೆಸಲಿದೆ. ರೈತರೂ ಸಹ ಗ್ರಾಮ ಲೆಕ್ಕಿಗರು, ಕಂದಾಯ ಪರಿವೀಕ್ಷಕರು, ನಾಡ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲೂ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಅರ್ಜಿ ಸಲ್ಲಿಸಿ ಅನೇಕ ವರ್ಷಗಳಾದರೂ ಪಹಣಿ ತಿದ್ದುಪಡಿಗಳು ಕಾರಣಾಂತರಗಳಿಂದ ಬಾಕಿ ಉಳಿದಿವೆ. ಅತ್ಯಂತ ಶೀಘ್ರವಾಗಿ ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ರೈತರ ಅಭಿಮಾನವನ್ನು ಗಳಿಸಿ ಎಂದು  ಹೇಳಿದರು.
ಭೂ ಹಿಡುವಳಿ ಪ್ರಮಾಣ ಪತ್ರ, ಪೌತಿ ಖಾತೆ ಬದಲಾವಣೆ, ಆಕಾರ ವ್ಯತ್ಯಾಸ ಸರಿಪಡಿಸುವಿಕೆ, ಸಕಾಲಿಕ ಬೆಳೆ ಮಾಹಿತಿ, ರೈತರು ಬ್ಯಾಂಕ್ ಸಾಲ ಪಡೆಯಲು ಮುಕ್ತ ಮಾಲಿಕತ್ವಕ್ಕೆ, ದೋಷ ಮುಕ್ತ ದಾಖಲೆಗಳ ನಿರ್ವಹಣೆಗೆ ಆರ್ಟಿಸಿ ತಿದ್ದುಪಡಿ ಆಂದೋಲನ ಅಗತ್ಯವಿದೆ. ಇದರಿಂದ ಕಂದಾಯ ಇಲಾಖೆಯ ಮುಂದಿನ ಆಡಳಿತ ವ್ಯವಸ್ಥೆಗೂ ನೆರವಾಗಲಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಚನ್ನರಾಯಪಟ್ಟಣ ತಹಸೀಲ್ದಾರ್ ಡಾ. ನಾಗರಾಜ್ ಅವರು ಭೂಮಿ ಮತ್ತು ರೈತನ ಸಂಬಂಧ, ಆರ್ಟಿಸಿ ತಿದ್ದುಪಡಿಯ ಮಹತ್ವ, ಅನುಸರಿಸಬೇಕಾದ ಕ್ರಮಗಳು, ತಿದ್ದುಪಡಿ ವಿಳಂಬದಿಂದಾಗುವ ಸಮಸ್ಯೆಗಳು, ತಿದ್ದುಪಡಿ ವೇಳೆ ಎದುರಾಗುವ ಗೊಂದಲಗಳು ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಿದರು.
ಹಾಸನ ಉಪವಿಭಾಗಾಧಿಕಾರಿ ಶರತ್, ಸಕಲೇಶಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್, ನಾನಾ ತಾಲೂಕುಗಳ ತಹಸೀಲ್ದಾರರು, ಕಂದಾಯ ಪರಿವೀಕ್ಷಕರು, ಸರ್ವೇಯರ್ಗಳು ಕಾರ್ಯಾಗಾರದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement