ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಶಾಸಕ
ಕನ್ನಡಪ್ರಭ ವಾರ್ತೆ ಸಕಲೇಶಪುರ ಡಿ. 24
ತೀರಾ ಹದಗೆಟ್ಟ ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನು ಮೊದಲ ಆದ್ಯತೆಯಲ್ಲಿ ಅಭಿವೃದ್ಧಿ ಗೊಳಿಸಲಾಗುವುದು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಪಡೆ (ಟಾಸ್ಕ್ಫೋರ್ಸ್)ಸಮಿತಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 1.47 ಲಕ್ಷ ಕಿ.ಮೀ. ಜಿಲ್ಲಾ ಪಂಚಾಯ್ತಿ ರಸ್ತೆಗಳಿದ್ದರೆ ಇದುವರೆಗೆ ಕೇವಲ 55 ಸಾವಿರ ಕಿ.ಮೀ. ರಸ್ತೆಗಳು ಮಾತ್ರ ಡಾಂಬರಿಕರಣಗೊಂಡಿವೆ ಎಂದು ಹೇಳಿದರು.
ಈ ರಸ್ತೆಗಳ ಗುಂಡಿ ಮಚ್ಚಲು ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ 175 ತಾಲೂಕುಗಳಿಗೆ 109 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತಾಲೂಕಿನ ಜಿಲ್ಲಾ ಪಂಚಾಯ್ತಿ ರಸ್ತೆ ಗುಂಡಿ ಮುಚ್ಚಲು 47 ಲಕ್ಷ ಬಿಡುಗಡೆ ಮಾಡಿದೆ. ಆದರೆ ಈ ಹಣ ಯಾವುದಕ್ಕೂ ಸಾಲದಾಗಿದೆ ಎಂದರು.
ತಾಲೂಕಿನಲ್ಲಿ 749 ಕಿ.ಮೀ ಜಿಲ್ಲಾ ಪಂಚಾಯ್ತಿ ರಸ್ತೆಗಳಿದ್ದು ಇದರಲ್ಲಿ 288 ಕಿ.ಮೀ. ಡಾಂಬರೀಕರಣಗೊಂಡಿದ್ದರೆ, 95 ಕಿ.ಮೀ.ಜಲ್ಲಿ ರಸ್ತೆಯಾಗಿದೆ. ಉಳಿದ 256 ಕಿ.ಮೀ. ಮಣ್ಣಿನ ರಸ್ತೆಯಾಗಿದೆ ಆದರೆ ಈಗಾಗಲೇ ಡಾಂಬರಿಕರಣಗೊಂಡ ರಸ್ತೆಗಳು ಗುಂಡಿಬಿದ್ದು ಹಾಳಾಗಿದ್ದು ಇದರಲ್ಲಿ ತೀರ ದುಸ್ಥಿತಿಯಿಂದ ಕೂಡಿರುವ ರಸ್ತೆಗಳ ಗುಂಡಿಮುಚ್ಚಲು ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ನೆರೆಯ ಜಿಲ್ಲೆಗಳಾದ ಕೊಡಗು ಹಾಗೂ ಚಿಕ್ಕಮಗಳೂರಿಗೆ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿದ್ದು, ಮಲೆನಾಡು ಪ್ರದೇಶವಾಗಿರುವ ಸಕಲೇಶಪುರ ತಾಲೂಕಿಗೂ ಈ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಶೀಘ್ರವೇ ನಿಯೋಗ ತೆರಳಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯ್ತಿ ಅದ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ವೇದಾವತಿ, ಸಮಿತಿ ಕಾರ್ಯದರ್ಶಿ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯರಾಂ, ಜಿಪಂ ಸದಸ್ಯರಾದ ಸುಲೋಚನಾ ರಾಮಕೃಷ್ಣ, ಮಂಜಮ್ಮ, ಬೈರಮುಡಿ ರಾಮಚಂದ್ರತಾಪಂ ಸದಸ್ಯರು ಇದ್ದರು.