ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇನ್ನೂ ಸರಿಯಾಗಿ ಜಾರಿಯಾಗದ ಆರ್ಟಿಇ ಕಾಯ್ದೆ: ವಿ. ಶ್ರೀನಿವಾಸ್

Mainashree
Updated On : 25 Dec 2013, 9:24 am

ಕ.ಪ್ರ.ವಾರ್ತೆ  ಹಾಸನ  ಡಿ. 25
ದೇಶದಲ್ಲಿ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಕಾನೂನು ಜಾರಿಗೆ ತಂದಿದ್ದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಎಂ.ಕೃಷ್ಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಹಕ್ಕು ಸಮಿತಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಸಮರ್ಪಕ ಜಾರಿಗಾಗಿ ಆರ್ಟಿಇ ಫಲಾನುಭವಿ ಪೋಷಕರ ಮತ್ತು ಪ್ರಗತಿಪರ ಸಂಘಟನೆಗಳ ಜಿಲ್ಲಾ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.
ದೇಶ ಅಭಿವೃದ್ಧಿ ಹೊಂದಿದೆ ಎಂದ ಅಣೆಪಟ್ಟಿ ಹಾಕಿಕೊಂಡಿರುವ ವಿದೇಶಗಳಲ್ಲಿ 1800ನೇ ಇಸವಿಯಲ್ಲಿಯೇ ಶಿಕ್ಷಣ ನೀಡಬೇಕು ಎಂಬ ಕಾಯ್ದೆ ಜಾರಿ ಅಗಿದೆ. ನೆದರ್ಲ್ಯಾಂಡ್ನಲ್ಲಿ 1909ರಲ್ಲಿಯೇ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಬಿಲ್ ಪಾಸ್ ಆಗಿತ್ತು ಎಂದರು.
ಆದರ ಫಲವಾಗಿಯೇ ಇಂದು ಆ ದೇಶಗಳಲ್ಲಿ ಶೇ.99ರಷ್ಟು ಸರ್ಕಾರಿ ಶಾಲೆಗಳು ಇದ್ದು, ಕೇವಲ ಶೇ.1ರಷ್ಟು ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರೆ ಭಾರತದಲ್ಲಿ ಆ ಮಾತು ಉಲ್ಟಾ ಆಗಿದೆ. ದೇಶದಲ್ಲಿ ಕಡ್ಡಾಯ ಶಿಕ್ಷಣ ನೀಡಬೇಕೆಂದು ಕಾಯ್ದೆ ಆಗಿ ಕೇವಲ 4 ವರ್ಷ ಕಳೆದಿದೆ.
ಈ ಕಾಯ್ದೆಯನ್ನು ರಾಜ್ಯದಲ್ಲಿ ಕೊನೆ ಸಂದರ್ಭದಲ್ಲಿ ಜಾರಿಗೆ ತರಲಾಗಿದೆ. ಈ ಮಟ್ಟದಲ್ಲಿ ಶಿಕ್ಷಣ ಕಾಯ್ದೆ ಮುಂದುವರೆಯುತ್ತಿದೆ. ಆದರೆ ಆರ್ಟಿಇ ಕಾಯ್ದೆ ಬಗ್ಗೆ ಇನ್ನು ಸರಿಯಾದ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಸಹ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಕೇವಲ ಜಾತಿ, ವರ್ಗ, ಹಣದ ಆಧಾರ ಮೇಲೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇನ್ನು ಸರಿಯಾಗಿ ಸಾರ್ವತ್ರಿಕ ಹಾಗೂ ಸಮಾನ ಶಿಕ್ಷಣ ಲಭ್ಯವಾಗುತ್ತಿಲ್ಲ. ಈ ಶಿಕ್ಷಣ ಲಭ್ಯವಾಗದ ಕಾರಣ ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಲು ಕಾರಣವಾಗಿದೆ ಎಂದರು.
ಕೊತಾರಿ ಕಮೀಷನ್ ಈ ಹಿಂದೆ ಶಿಕ್ಷಣಕಾಯ್ದೆಯನ್ನು ಜಾರಿಗೆ ತರುವಂತೆ ವರದಿ ನೀಡಿತ್ತು. ಆ ವರದಿಯಲ್ಲಿ ಸಮಾನತೆ, ಜಾತ್ಯತೀತ, ಧರ್ಮಾತೀತ ಶಿಕ್ಷಣ ನೀಡಬೇಕು ಅಂತಿದೆ. ಆ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ರಚಿಸುವಂತೆ ಸೂಚಿಸಿತು. ಆದರೆ ಆಗ ಕೊತಾರಿ ಕಮಿಷನ್ ವರದಿ ಅನುಷ್ಠಾನಕ್ಕೆ ದೇಶದ ನಾಯಕರು ಮುಂದಾಗಲಿಲ್ಲ ಎಂದು ಹೇಳಿದರು.
ಕೊತಾರಿ ಕಮಿಷನ್ ವರದಿಯಂತೆ ಶಿಕ್ಷಣ ಕಾಯ್ದೆ ಹಿಂದೆ ಜಾರಿಯಾಗಿದ್ದರೆ ದೇಶದಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು ಎಂದ ಅವರು, ರಾಜ್ಯದಲ್ಲಿ 54 ಸಾವಿರ ಮಕ್ಕಳು ಶಾಲೆಯಿಂದ ಹೊರ ಉಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಆರರ್ಟಿ ಇ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ, ಇತ್ತೀಚೆಗೆ ಖಾಸಗಿ ಶಾಲೆಗಳು ಹೆಚ್ಚಾಗಿದ್ದು, ಮನಸೋ ಇಚ್ಛೆ ಶುಲ್ಕಗಳನ್ನು ವಸೂಲಿ ಮಾಡುವ ದಂದೆ ಹೆಚ್ಚುತ್ತಿದೆ. ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದರೂ ಶಾಲೆಗಳು ನಾನಾ ಕಾರಣಗಳನ್ನು ನೀಡಿ ಶೇ.25ರಷ್ಟು ಸೀಟುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಮುಂದಾಗುತ್ತಿಲ್ಲ. ಆದ್ದರಿಂದ 10ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ ಚಳವಳಿಯ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ಲೇಖಕಿ ರೂಪ ಹಾಸನ್, ಲೇಖಕಿ ಬ ಬಳಗದ ಅಧ್ಯಕ್ಷೆ ನಿರ್ಮಲ ವಿ.ದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement