ಕ್ರೀಡಾಮನೋಭಾವ ಬೆಳೆಸಿಕೊಂಡು ಸದೃಢರಾಬೇಕು: ಆನಂದಕೃಷ್ಣ
ಹಾಸನ: ಪ್ರತಿ ವ್ಯಕ್ತಿಯು ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಆನಂದಕೃಷ್ಣ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಹಾಸನ ವೃತ್ತ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ವಿದ್ಯುತ್ ಕಂಪನಿಗಳ ಕಬ್ಬಡಿ, ಖೋಖೋ, ಈಜು, ಪವರ್ಲಿಪ್ಟಿಂಗ್ ಹಾಗೂ ದೇಹದಾರ್ಢ್ಯಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿದ್ಯುತ್ ಕಂಪನಿಗೆ ಉತ್ತಮ ಹೆಸರನ್ನು ತಂದುಕೊಡಬೇಕು. ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದರು. ಯಾವುದೇ ಕ್ರೀಡಾಪಟುವಿಗೆ ಅವಕಾಶ ನೀಡಿದಾಗ ಮಾತ್ರ ಅವನಲ್ಲಿ ಇರುವ ಪ್ರತಿಭೆ ಹೊರ ಬರಲು ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬೇಕು. ವಿದ್ಯುತ್ ನಿಗಮಕ್ಕೆ ರಾಷ್ಟ್ರಮಟ್ಟದಲ್ಲಿ ಈಗ ಎರಡನೇ ಸ್ಥಾನವಿದ್ದು, ಮುಂದಿನ ದಿನಗಳಲ್ಲಿ ಮೊದಲನೆ ಸ್ಥಾನಕ್ಕೆ ಏರಲು ಮುಂದಾಗಲಿ ಎಂದು ಹೇಳಿದರು.
ಮುಖ್ಯ ಎಂಜಿನಿಯರ್ ಎಂ.ಶಾಂತಿ, ಅಧೀಕ್ಷಕ ಎಂಜಿನಿಯರ್ ನಾಗೇಶ್, ಎಸ್.ಆರ್.ಪ್ರಸಾದ್, ಅಧೀಕ್ಷಕ ಎಂಜಿನಿಯರ್ ಎಚ್.ಜಿ.ಸತ್ಯನಾರಾಯಣ ಇದ್ದರು.