ತೂಕದಲ್ಲಿ ರೈತರಿಗೆ ಮೋಸ: ವ್ಯಾಪಾರಿಗಳಿಗೆ ಸಖತ್ ಗೂಸಾ
ಸಕಲೇಶಪುರ: ಬತ್ತ ಖರೀದಿ ವೇಳೆ ರೈತರನ್ನು ತೂಕದಲ್ಲಿ ವಂಚಿಸುತ್ತಿದ್ದ ವ್ಯಾಪಾರಿಗಳನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.ಬೇಲೂರು ಪಟ್ಟಣದ ರಿಯಾಜ್, ಸಿಕಂದರ್, ಅಹಮ್ಮದ್ ಷರೀಫ್ ಅಬ್ಬಾಸ್, ಸಾಯರ್ ಎಂಬುವರು ಸ್ಥಳದಲ್ಲೇ ಹಣ ನೀಡುವ ಭರವಸೆ ನೀಡಿ ಗ್ರಾಮಕ್ಕೆ ಲಾರಿ ತಂದು ಬತ್ತ ತುಂಬಿಸುತ್ತಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಉದಯ್ಕುಮಾರ್ ಎಂಬುವರ ಬತ್ತ ತುಂಬುವ ವೇಳೆ ಯಾವುದೇ ವ್ಯತ್ಯಾಸ ಕಂಡು ಬಾರದಿದ್ದರೂ ಉಮಾಶಂಕರ್ ಎಂಬುವರ 104 ಚೀಲ ಮತ್ತು ಪ್ರದೀಪ್ ಎಂಬ ರೈತರ 30 ಚೀಲ ಬತ್ತ ತೂಕದ ವೇಳೆ ರೈತರ ಕಣ್ತಪ್ಪಿಸಿ ತೂಕದಲ್ಲಿ ಮೋಸ ಮಾಡುತ್ತಿರುವುದು ಅರಿವಿಗೆ ಬಂದಿದ್ದರಿಂದ ಮೂಟೆಗಳನ್ನು ಪುನಾ ತೂಕಕ್ಕೆ ಹಾಕಿದ ವೇಳೆ 50 ಕೆ.ಜಿ ಬತ್ತದ ಚೀಲದಲ್ಲಿ ಸುಮಾರು 2 ರಿಂದ 5 ಕೆ.ಜಿ ಬತ್ತವನ್ನು ಮೋಸ ಮಾಡುತ್ತಿರುವುದು ದೃಢಪಟ್ಟಿತು.
ಅಲ್ಲದೆ, ಈ ವಿಷಯ ಗ್ರಾಮದಲ್ಲಿ ಹರಡಿ ರೊಚ್ಚಿಗೆದ್ದ ಗ್ರಾಮಸ್ಥರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಈ ವ್ಯಾಪಾರಿಗಳನ್ನು ಒಪ್ಪಿಸಿದರು. ಠಾಣೆ ಆವರಣದಲ್ಲಿ ನಡೆದ ಮರು ತೂಕದ ವೇಳೆ 2 ಕ್ವಿಂಟಾಲ್ ಬತ್ತವನ್ನು ವ್ಯಾಪಾರಿಗಳು ಹೆಚ್ಚಾಗಿ ತುಂಬಿ ಮೋಸ ಮಾಡಿರುವುದಾಗಿ ತಿಳಿದುಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.