ಮರಳು ದಂಧೆಕೋರರಿಂದ ಹೆಸರು ದುರ್ಬಳಕೆ: ಪ್ರಜ್ವಲ್
ಹಾಸನ: ಸಕಲೇಶಪುರ ತಾಲೂಕಿನ ನಾನಾ ಕಡೆಗಳಲ್ಲಿ ಮರಳು ಮತ್ತು ಮರದ ದಂಧೆಯಲ್ಲಿ ತೊಡಗಿರುವ ಕೆಲವರು ನನ್ನ ಹೆಸರನ್ನು ಅನಗತ್ಯವಾಗಿ ದುಣ್ಗಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ. ಇಂತಹವರ ವಿರುದ್ಧ ಕಿಡಿ ಕಾರಿರುವ ಪ್ರಜ್ವಲ್, ಯಾರು ಮರಳು ಮತ್ತು ಮರವನ್ನು ಕಳ್ಳಸಾಗಣೆ ದಂಧೆಯಲ್ಲಿ ತೊಡಗಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಜನಪರವಾದ ಕೆಲಸ ಕಾರ್ಯಗಳಿಗೆ ಯಾವಾಗಲೂ ನನ್ನ ಬೆಂಬಲ ಇದೆ. ಆದರೆ ಅಕ್ರಮ ನಡೆಸುತ್ತಿರುವವರು ನನ್ನ ಹೆಸರನ್ನು ಬಳಸಿಕೊಂಡು ತಮ್ಮ ದಂಧೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಈ ಮೂಲಕ ನನ್ನ ಹಾಗೂ ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಕುಕೃತ್ಯದಲ್ಲಿ ತೊಡಗಿದ್ದಾರೆ ಎಂದರು. ನನ್ನ ಹೆಸರನ್ನು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಈ ಮೂಲಕ ಎಚ್ಚರಿಸುತ್ತೇನೆ. ಪೊಲೀಸ್ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅಕ್ರಮ ದಂಧೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ವಲ್ ಮನವಿ ಮಾಡಿದ್ದಾರೆ.