'ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ'
ಕನ್ನಡಪ್ರಭ ವಾರ್ತೆ ಆಲೂರು ಡಿ. 25
ಸಂಗೀತಕ್ಕೆ ಹಲವು ರೋಗಗಳನ್ನು ಗುಣ ಪಡಿಸುವಂತಹ ಶಕ್ತಿಯೂ ಇದೆ ಎಂದು ಉಪ ಪ್ರಾಂಶುಪಾಲ ಕೃಷ್ಣಪ್ಪ ತಿಳಿಸಿದರು. ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಕಲಾವಿದ ನೇರಲೆಕೆರೆ ಕೆ.ಡಿ. ದೇವರಾಜ್ ತಂಡದವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಂದ ವಯೋವೃದ್ಧರವರೆಗೂ ಸಂಗೀತಕ್ಕೆ ಮಾರು ಹೋಗದವರಿಲ್ಲ. ಜನಪದ ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇತ್ತೀಚೆಗೆ ಯುವ ಜನತೆ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ ಎಂದ ಅವರು ನಮ್ಮ ಯುವ ಜನಾಂಗ ಭಾರತೀಯ ಸಂಗೀತವನ್ನು ಉಳಿಸುವತ್ತ ಗಮನ ಹರಿಸಬೇಕು ಎಂದರು.
ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು. ಯು.ಎನ್. ಭಾಸ್ಕರ್, ದಾಕ್ಷಾಯಿಣಿ ಹಾಗೂ ಶಿಕ್ಷಕರು ಇದ್ದರು.