ಸುದ್ದಿ ಸಂಕ್ಷೇಪ
ದೇವಾಲಯ ಸಮಿತಿ ಬಗ್ಗೆ ತೀವ್ರ ನಿರ್ಲಕ್ಷ್ಯ
ಬೇಲೂರು: ಚನ್ನ ಕೇಶವ ದೇವಾ ಲಯದ ವ್ಯವಸ್ಥಾಪನಾ ಸಮಿತಿ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಸಮಿತಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಉಪ ಸಮಿತಿ ಅಧ್ಯಕ್ಷ ಎನ್.ಆರ್.ಸಂತೋಷ್ ಆರೋಪಿಸಿದ್ದಾರೆ.
ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಹಿಂದೆ ವ್ಯವಸ್ಥಾಪನಾ ಸಮಿತಿಯನ್ನು ವಜಾ ಗೊಳಿಸಿತ್ತು.
ಈ ವಿಚಾರವಾಗಿ ಚನ್ನಕೇಶವಸ್ವಾಮಿ ದೇವಾಲಯ ಸಮಿತಿ ಜಿ.ಕೆ.ಕುಮಾರ್, ಎನ್.ಆರ್.ಸಂತೋಷ್, ಬಿ.ಆರ್.ಜಗದೀಶ್, ಬಿ.ಶಾಂತಾಮಣಿ, ಪ್ರೇಮ, ಬಿ.ಕೆ.ಶ್ರೀಹರಿ, ಶೈಲೇಶ್, ಬಿ.ಎನ್.ವಿಶ್ವನಾಥ್ ಅವರು ಉಚ್ಚನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸಮಿತಿಯನ್ನು ಮುಂದುವರೆಸುವಂತೆ ಕೋರಿದ್ದರು.
ಅದರಂತೆ ರಾಜ್ಯ ಉಚ್ಚನ್ಯಾಯಾಲಯ ಯತಾಸ್ಥಿತಿ ಮುಂದುವರೆಸುವಂತೆ ಆದೇಶ ನೀಡಿತ್ತು ಎಂದು ತಿಳಿಸಿದರು.
ಅದರೆ ದೇವಾಲಯದ ಅಧಿಕಾರಿಗಳು ಈ ಬಗ್ಗೆ ಪ್ರಶ್ನಿಸಿದರೆ ಜಿಲ್ಲಾಧಿಕಾರಿ ದೇವಾಲಯ ಜವಾಬ್ದಾರಿ ನಿರ್ವಹಿಸುತ್ತಿದ್ದು, ದೇವಾಲಯಕ್ಕೆ ಯಾವುದೇ ಆದೇಶ ಬಂದಿಲ್ಲ ಎಂಬ ನೆಪ ಹೇಳುತ್ತಿದ್ದಾರೆ ಎಂದು ದೂರಿದರು.ಕೂಡಲೇ ಜಿಲ್ಲಾಧಿಕಾರಿ ಸಮಿತಿಯನ್ನು ಬಳಕೆ ಮಾಡಿಕೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆಲೂರಲ್ಲಿ ಸಡಗರದ ಕ್ರಿಸ್ಮಸ್ ಆಚರಣೆ
ಆಲೂರು: ಪಟ್ಟಣ ಹಾಗೂ ತಾಲೂಕಿನಾದ್ಯಂತ ಬುಧವಾರ ಕ್ರೈಸ್ತ ಬಾಂಧವರು ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಆಚರಿಸಿದರು. ಇಲ್ಲಿಯ ಖಾಜಿ ಮೊಹಲ್ಲಾದ ಕ್ರೈಸ್ತ ಬಿಲಿವರ್ ಚರ್ಚ್ನ್ನು ವಿದ್ಯುದ್ದೀಪಗಳಿಂದ ಸುಂದರವಾಗಿ ಸಿಂಗರಿಸಲಾಗಿತ್ತು. ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿ ಪ್ರತಿ ವರ್ಷ ನಡೆಸುವಂತೆ ಬೊಂಬೆಗಳನ್ನು ಚರ್ಚ್ ಆವರಣದಲ್ಲಿ ವಿಶಿಷ್ಟವಾಗಿ ಅಲಂಕರಿಸಿದ್ದರು.
ಕ್ರೈಸ್ತ ಧರ್ಮ ಗುರು ಫಾದರ್ ಡಿ.ಸಿ.ಬಸವರಾಜ್ ಜಗತ್ತಿನ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿ ಏಸುವಿನ ದೇವಾಲಯ ಇಲ್ಲಿ ಯಾವ ಕೆಲಸ ಮಾಡಿದರೂ ಎಲ್ಲವೂ ಪ್ರಭುವಿಗೆ ಸಲ್ಲುತ್ತದೆ ಎಲ್ಲವನ್ನು ಮಾಡುವುದೇ ಭಕ್ತಿ ಎಂದರು. ನಾವು ಮಾಡುವ ಪ್ರತಿ ಕೆಲಸ ಏಸುವಿಗೆ ಅರ್ಪಣೆಯಾಗಬೇಕು ಎಂದು ತಿಳಿಸಿದರು.ಬೆಂಗಳೂರಿನ ಡಯಾಸಿಸ್ ಆಡಿಯೋ ರಿಸಲ್ ಇಂಚಾರ್ಜ್ ಇಮಾನ್ವೆ ಮಕ್ಕಳಿಗೆ ಕಿಟ್ ವಿತರಿಸಿದರು.
ಚಿತ್ರಕಲಾ ಸ್ಪರ್ಧೆ
ಹಾಸನ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ 57ನೇ ಪರಿನಿಬ್ಬಾಣ ದಿನದ ಅಂಗವಾಗಿ ಎಂಟಿಎಸ್ ಎಸ್ಯೂತ್ ಗ್ರೂಪ್ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಚಿತ್ರಕಲಾ ಶಿಕ್ಷಕ ದೇಸಾಯಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಉಪನ್ಯಾಸಕ ಪ್ರಸಾದ್, ಸಮಾಜ ಸೇವಕ ಆರ್.ಜಿ. ಗಿರೀಶ್, ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ತೌಫಿಕ್, ಶಂಕರ್, ಚಂದ್ರಶೇಖರ್ ಹಾಗೂ ಎಂಟಿಎಸ್ಎಸ್ ಯೂತ್ ಗ್ರೂಪ್ನ ಸದಸ್ಯರು ಇದ್ದರು. ಕಾರ್ಯಕ್ರಮ ಉದ್ಘಾಟಿಸಿದ ಚಿತ್ರಕಲಾ ಶಿಕ್ಷಕ ಬಿ.ಆರ್. ದೇಸಾಯಿ ಅವರು ಅಂಬೇಡ್ಕರ್ ಬಾಲ್ಯ ಮತ್ತು ಅವರು ಎದುರಿಸಿದ ಕಷ್ಟದ ಪರಿಸ್ಥಿತಿ ಮಕ್ಕಳಿಗೆ ವಿವರಿಸಿದರು. ಚಿತ್ರಕಲೆ ಮಕ್ಕಳ ಜೀವನವನ್ನು ವಿನ್ಯಾಸಗೊಳಿಸಲು ಸಹಕಾರಿ ಎಂದ ಅವರು ಚಿತ್ರಕಲೆಯಲ್ಲಿ ಹಾಸನ ಮೊದಲ ಸ್ಥಾನದಲ್ಲಿದೆ, ಇದು ಹಾಸನಕ್ಕೆ ಹೆಮ್ಮೆಯ ವಿಷಯ ಎಂದರು. ಪ್ರಸಾದ್, ಶಿವಣ್ಣ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.