ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಧಾರ್'ಗೆ ಸ್ವೀಕೃತ ಅರ್ಜಿಯೇ ಬೀದಿಪಾಲು

Rashmi Kasaragodu
Updated On : 27 Dec 2013, 1:25 am

ಕ.ಪ್ರ.ವಾರ್ತೆ   ರಾಮನಾಥಪುರ   ಡಿ. 26
ಇತ್ತೀಚೆಗೆ ಆಯಾ ಕಡೆಗಳಲ್ಲಿ ಆಧಾರ್ ಕಾರ್ಡ್ನ ಅರ್ಜಿ ಸ್ವೀಕರಿಸುತ್ತಿದ್ದು, ಇದರಿಂದ ರೈತರಿಗೆ ನಾಗರಿಕರಿಗೆ ಹೆಚ್ಚು ಅನುಕೂಲವಾಗಬಹುದೆಂಬ ಸರ್ಕಾರದ ನಿರೀಕ್ಷೆ ಹುಸಿಯಾಗಿದೆ.  
ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಯ ಹೊನಗಾನಹಳ್ಳಿ ಹಾಗೂ ಕಾರಗಲ್ ಗೇಟ್ ಮಧ್ಯೆ ರಸ್ತೆಯ ಸಮೀಪದ ಒಂದು ಕಿರುನಾಲೆಯ ಬಳಿ ಆಧಾರ್ ಕಾರ್ಡ್ನ ಸ್ವೀಕೃತ ಮೂಲ ದಾಖಲಾತಿಗಳನ್ನು ಬೇಕಾಬಿಟ್ಟಿ ಬಿಸಾಡಿ ಹೋಗಿರುವುದು ಮಂಗಳವಾರ ಸ್ಥಳೀಯರ ಗಮನ ಸೆಳೆಯಿತು.  
ಹತ್ತಿರ ಹೋಗಿ ಪರಿಶೀಲಿಸಿದಾಗ ಇತ್ತೀಚೆಗೆ ಇದೇ ಹಂಡ್ರಂಗಿ ಪಂಚಾಯ್ತಿಯಲ್ಲಿ ಕ್ರಿಯೇಟಿವ್ ಟೀಮ್, ಬೆಂಗಳೂರು ಇವರು ಆಧಾರ್ ಕಾರ್ಡ್ಗೆ ಅರ್ಜಿ ಸ್ವೀಕರಿಸುತ್ತಿದ್ದಾರೆ. ಕಾಡಾನೆಗಳ ಉಪದ್ರವವನ್ನು ಸಹ ಲೆಕ್ಕಿಸದೆ ಜೀವ ಅಂಗೈಲಿಟ್ಟುಕೊಂಡು ಸುತ್ತಮುತ್ತ ಹಾಗೂ ಅರಣ್ಯದಂಚಿನಲ್ಲಿರುವ ಗ್ರಾಮಗಳ ಗ್ರಾಮಸ್ಥರು ಬೆಳಿಗ್ಗೆ 6 ರಿಂದ ರಾತ್ರಿ 11ರವರೆಗೂ ಆಧಾರ್ ಕಾರ್ಡ್ ಮಾಡಿಸಲು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ. ಹಾಗೂ ದೂರದ ಊರುಗಳಲ್ಲಿ ಕೆಲಸದಲ್ಲಿರುವ ಈ ವ್ಯಾಪ್ತಿಗೆ ಬರುವ ಗ್ರಾಮಸ್ಥರು ಕೆಲವರು ಸಿಕ್ಕಾಪಟ್ಟೆ ಬಸ್ ದರ ನೀಡಿ ಬಂದು ಕೆಲವು ದಿನ ಇಲ್ಲಿ ತಂಗಿದ್ದು, ಆಧಾರ್ಗೆ ಅರ್ಜಿ ನೀಡಿ ಹೋಗಿದ್ದು ಉಂಟು.
ಆದರೆ ಈ ಕ್ರಿಯೇಟಿವ್ ಟೀಮ್ ಬೆಂಗಳೂರು ಕಂಪನಿಯವರ ನಿರ್ಲಕ್ಷ್ಯದಿಂದ ಸರಿಯಾದ ಕಡೆ ತಲುಪಬೇಕಾದ ಜನರಿಂದ ಪಡೆದಿರುವ ಸುಮಾರು 200 ರಿಂದ 300 ಆಧಾರ್ ಕಾರ್ಡ್ ಅರ್ಜಿ ಫಾರಂಗಳು ಈ ರೀತಿ ರಸ್ತೆ ಬದಿ ಅನಾಥವಾಗಿ ಬಿಸಾಡಿ ಹೋಗಿರುವುದನ್ನು ಖಂಡಿಸಿ ಈ ಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮದ ಯುವಕ ಕಾರ್ಯಪ್ಪ ಆಗ್ರಹಿಸಿದ್ದಾರೆ.  
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಚ್.ಇ. ಜಗದೀಶ್ ಮಾತನಾಡಿ ಈ ರೀತಿ ರೈತರ ಮತ್ತು ನಾಗರಿಕರಿಂದ ಸ್ವೀಕೃತಗೊಂಡ ಆಧಾರ್ಕಾರ್ಡ್ ಅರ್ಜಿಗಳು ಈ ರೀತಿ ರಸ್ತೆ ಬದಿ ಬೀದಿ ಪಾಲಾಗಿರುವುದು ಅರಕಲಗೂಡು ತಾಲೂಕು ಆಡಳಿತ ವ್ಯವಸ್ಥೆ ಹೇಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದು ಇಂಬು ನೀಡಿದಂತಾಗಿದೆ.  
ಹೇಳುವವರು ಕೇಳುವವರು ಇಲ್ಲದಂತಾಗಿ ತಾಲೂಕಿನ ಪರಿಸ್ಥಿತಿ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ.  ಕ್ರಿಯೇಟಿವ್ ಟೀಮ್ ಬೆಂಗಳೂರು ಕಂಪನಿಯ ಇಲ್ಲಿನ ಜವಾಬ್ದಾರಿಯನ್ನು ಮೋಹನ್ ಎಂಬಾತ ನಿರ್ವಹಿಸುತ್ತಿದ್ದು, ಈ ವಿಚಾರವಾಗಿ ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ.    ತಾಲೂಕಿನಲ್ಲಿ ಈ ಕಂಪನಿಯವರಿಗೆ ನೀಡಿರುವ ಆಧಾರ್ ಗುತ್ತಿಗೆಯನ್ನು ಕೂಡಲೆ ವಜಾಗೊಳಿಸಿ ಇವರ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆಯೂ ಹಾಗೂ ಈ ವಿಚಾರವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮನೆ ಮುಂದೆ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು. ತರಗಳಲೆ ದಿಲೀಪ್, ಕಾರಗಲ್ಗೇಟ್ನ ಕೆ.ಕೆ. ರಾಜೇಗೌಡ, ಕೆ.ಜಿ. ಜಗದೀಶ್, ಹೊನಗಾನಹಳ್ಳಿ ಚನ್ನರಾಜು, ಮಧು, ಸುಬ್ಬೇಗೌಡ ಇದ್ದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement