ಕಡು ಬಡವರಿಗೆ ಶಾಶ್ವತ ಸೂರಿಗೆ ಯತ್ನ'
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಡಿ.26
ಸಮಾಜದಲ್ಲಿನ ಅತ್ಯಂತ ಬಡವರನ್ನು ಗುರುತಿಸಿ ಅವರಿಗೆ ಶಾಶ್ವತ ಸೂರು ಕಲ್ಪಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಅಂತಹ ಕಡುಬಡವರನ್ನು ಗುರುತಿಸುವುದಾಗಿ ಶಾಸಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡಿನ ರೆಹೊಬೋತ್ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಸೂರು ಕಲ್ಪಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ, ಅದಕ್ಕಿಂತ ಮೊದಲು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಅದರಂತೆ ಆ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದಲ್ಲಿ ಅವರುಗಳಿಗೆ ಉತ್ತಮ ಭವಿಷ್ಯ ರೂಪಿಸಿದಂತೆ ಆಗಲಿದೆ ಎಂದರು. ರೆಹೊಬೋತ್ ಚರ್ಚ್ಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ತಾವು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಚರ್ಚ್ನ ಫಾದರ್ ವಸಂತ್ ಅವರನ್ನು ಶಾಸಕ ಎಚ್.ಡಿ.ರೇವಣ್ಣ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.
ತಹಸೀಲ್ದಾರ್ ಶಿವಶಂಕರಪ್ಪ ದ್ಘಾಟಿಸಿ, ಸಮಾಜದಲ್ಲಿನ ಬಡ ಮಕ್ಕಳ ವ್ಯಾಸಂಗಕ್ಕೆ ಯಾವುದೆ ತೊಂದರೆ ಆಗದಂತೆ ತಾವು ಸರ್ಕಾರದ ಸವಲತ್ತುಗಳನ್ನು ಒದಗಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ಪಾದ್ರಿ ವಸಂತ್, ಪುರಸಭೆ ಸದಸ್ಯ ಎಚ್.ವಿ.ಪುಟ್ಟರಾಜು, ಜಿಪಂ ಸದಸ್ಯೆ ಮಂಜುಳಬೈರಾಜು, ಚಿನ್ನಸ್ವಾಮಿ, ಚಂದ್ರು, ಈರಯ್ಯ ಇದ್ದರು.