ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಬೇಲೂರು ಡಿ. 26
ಹಳೆಬೀಡು ಹೋಬಳಿ ಘಟ್ಟದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೂತನಕೊಪ್ಪಲು ಗ್ರಾಮದಲ್ಲಿ 2 ತಿಂಗಳಿಂದ ಕುಡಿಯುವ ನೀರಿಲ್ಲದೆ ನಾಗರಿಕರು ಪರದಾಡುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಶಾಸಕ ವೈ.ಎನ್.ರುದ್ರೇಶ್ಗೌಡ ನಿವಾಸದ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿಯ ಮೂಡಿಗೆರೆ ರಸ್ತೆಯಲ್ಲಿರುವ ಶಾಸಕರ ನಿವಾಸಕ್ಕೆ ಖಾಲಿ ಕೊಡದೊಂದಿಗೆ ಮುತ್ತಿಗೆ ಹಾಕಿದ ದೂತನಹಳ್ಳಿ ಗ್ರಾಮಸ್ಥರು ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಹಾಲುಮರದಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘ, ವೀರಭದ್ರೇಶ್ವರ ಸ್ವಸಹಾಯ ಸಂಘದ ಶೀಲಾ, ಗೌರಮ್ಮ, ಕರ್ನಾಟಕ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಆನಂದ್ ಮಾತನಾಡಿ, 2 ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.
ಗ್ರಾಮಸ್ಥರು ಸ್ನಾನ ಮಾಡಿ ಅದೆಷ್ಟೋ ದಿನಗಳಾಗಿದ್ದು ಕುಡಿಯುವ ನೀರು ತರಬೇಕೆಂದರೆ 2 ಕಿ.ಮೀ ದೂರದಲ್ಲಿರುವ ಮಾಚೇನಹಳ್ಳಿಯ ಜಮೀನಿಗೆ ತೆರಳಿ ಬೋರ್ವೆಲ್ ಇರುವ ಖಾಸಗಿ ವ್ಯಕ್ತಿಗಳನ್ನು ಕಾಡಿಬೇಡಿ ನೀರು ತರಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಹೇಳಿದರೆ ಶಾಸಕರನ್ನು ಕೇಳಿ ಎಂದು ಸಾಗಹಾಕುತ್ತಾರೆ. ಅಧಿಕಾರಿಗಳ ಗಮನಕ್ಕೆ ತಂದರೆ ಅವರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು.