ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕಾಲು ಕಳೆದುಕೊಂಡ ಯುವಕ
ಅರಸೀಕೆರೆ: ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲು ಅರಸೀಕೆರೆ ಜಂಕ್ಷನ್ನಲ್ಲಿ ನಿಲುಗಡೆಯಾಗುವ ಸಮಯದಲ್ಲಿ ಚಲಿಸುತ್ತಿದ್ದ ರೈಲಿನಿಂದ ಅವಸರದಿಂದ ಇಳಿಯಲು ಹೋಗಿ ಬಿದ್ದ ಪರಿಣಾಮ ಚಿತ್ರದುರ್ಗ ಜಿಲ್ಲೆ ರಾಮಗಿರಿಯ ಕುಬೇರ (40) ಎಂಬಾತ ರೈಲುಗಾಡಿಗೆ ಸಿಲುಕಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಗುರುವಾರ ನಡೆದಿದೆ. ಅವರು ಜೆ.ಸಿ.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ಅವಘಡ ನಡೆದು 15 ನಿಮಿಷವಾದರೂ ರೈಲ್ವೆ ಪೊಲೀಸ್ ಹಾಗೂ ಸಾರ್ವಜನಿಕರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಮಾನವೀಯತೆಗಾದರೂ ಆ ವ್ಯಕ್ತಿಗೆ ನೀರು ಕುಡಿಸುವ ಪ್ರಯತ್ನ ಯಾರೂ ಮಾಡಲಿಲ್ಲ. ಅಪಘಾತಕ್ಕೆ ಒಳಗಾದ ವ್ಯಕ್ತಿ ಕೈ ಮುಗಿದು ತನ್ನನ್ನು ರಕ್ಷಿಸಿ ಎಂದು ಅಂಗಲಾಚಿ ಬೇಡಿಕೊಂಡರೂ ಆತನ ಬಳಿ ಸುಳಿಯಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.