ಜಿಎಸ್ಎಸ್ ಅಗಲಿಕೆ- ದಸಾಪ ಸಂತಾಪ
ಹಾಸನ: ಕುವೆಂಪು ನಂತರ ಮಾನವೀಯ ಮೌಲ್ಯ ಸಾರಿದ ಮಹಾನ್ ಸಾಹಿತಿ ಜಿಸ್ಎಸ್. ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ. ದಸಾಪ ಅಧ್ಯಕ್ಷ ಹೆತ್ತೂರು ನಾಗರಾಜ್, ಆರ್ಪಿಐ ಸತೀಶ್, ಸಿ. ಸುವರ್ಣ, ಬ್ಯಾಕರವಳ್ಳಿ ವೆಂಕಟೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.
ತಪ್ಪಿದ ಅನಾಹುತ: ನಿಟ್ಟುಸಿರು ಬಿಟ್ಟ ಜನ
ಸಕಲೇಶಪುರ: ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರ ಅಜಾಗರೂಕತಾ ಲಾರಿ ಚಾಲನೆಯಿಂದ ಪಟ್ಟಣದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿನಿತ್ಯ ನೂರಾರು ಜನರು ಈ ಪ್ರದೇಶದಲ್ಲಿ ನಿಲ್ಲುತ್ತಿದ್ದರಾದರೂ ಅದೃಷ್ಟವಶಾತ್ ಆ ಸಮಯದಲ್ಲಿ ಯಾರೂ ಅಲ್ಲಿ ಇರಲಿಲ್ಲ. ಎರಡು ದಿನಗಳ ಹಿಂದೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಪಟ್ಟಣದ ಮಿನಿ ವಿಧಾನಸೌಧದ ಬಳಿ ನಿಲ್ಲಿಸಲಾಗಿತ್ತು. ಈ ಲಾರಿ ಬೇರೆ ಕಡೆ ನಿಲುಗಡೆ ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಪ್ರಯತ್ನ ನಡೆಸಿದ್ದೇ ಈ ಘಟನೆಗೆ ಕಾರಣ. ಲಾರಿ ಬ್ರೇಕ್ ಸರಿಪಡಿಸಿಕೊಳ್ಳದೆ ಚಾಲನೆಗೆ ಮುಂದಾಗಿದ್ದರಿಂದ ಹತೋಟಿ ತಪ್ಪಿದ ಲಾರಿ, ಮಿನಿ ವಿಧಾನ ಸೌಧದಿಂದ ಸುಮಾರು 300 ಮೀಟರ್ ದೂರ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು.