ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವರಕೊಪ್ಪಲು ಗ್ರಾಮದಲ್ಲಿ ರೈತ ದಿನಾಚರಣೆ

Rashmi Kasaragodu
Updated On : 27 Dec 2013, 1:28 am

ಆಲೂರು: ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಕೃಷಿಯನ್ನು ಅವಲಂಬಿಸಿರುವುದರಿಂದ ಆಹಾರ ಕೊರತೆ ನಿವಾರಣೆಯಾಗುತ್ತಿದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಚನ್ನಕೇಶವ ತಿಳಿಸಿದರು.
 ಕಸಬಾ ದೇವರಮನೆಕೊಪ್ಪಲು ಗ್ರಾಮದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ. ಚೌಧರಿ ಚರಣ್ಸಿಂಗ್ ಹುಟ್ಟು ಹಬ್ಬದ ಅಂಗವಾಗಿ ಆತ್ಮ ಯೋಜನೆಯಡಿ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 ಭಾರತ ಶೇ. 60 ರಷ್ಟು ಹಳ್ಳಿ ಗಳನ್ನು ಹೊಂದಿರುವ ದೇಶವಾಗಿದ್ದು, ಹಳ್ಳಿಗಳಲ್ಲಿ ವಾಸಿಸುವ ಬಹುತೇಕ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಚರಣಸಿಂಗ್ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಜಮೀನ್ದಾರಿ ನಿರ್ಮೂಲನೆ ಕಾಯಿದೆ ರೂಪಿಸಿ ಕಾರ್ಯಗತ ಗೊಳಿಸಿದರು ಎಂದು ತಿಳಿಸಿದರು.
 ಸಹಾಯಕ ಕೃಷಿ ನಿರ್ದೇಶಕ ಕೆ.ಬಿ. ಸುಬ್ರಹ್ಮಣ್ಯ ಮಾತನಾಡಿ, ಸಾಮಾನ್ಯವಾಗಿ ರೈತರು ಮಳೆ ಅವಲಂಬಿತ ಕೃಷಿಯನ್ನು ನೆಚ್ಚಿಕೊಂಡಿರುತ್ತಾರೆ. ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಅಧಿಕ ಲಾಭವನ್ನು ಪಡೆಯಬಹುದು ಎಂದರು.
 ಅಧ್ಯಕ್ಷತೆ ವಹಿಸಿದ್ದ ಎಚ್.ಬಿ. ಮಲ್ಲಪ್ಪ ಮಾತನಾಡಿ, ಆತ್ಮ ಯೋಜನೆಯಡಿಯಲ್ಲಿ ಇಲಾಖೆಯಿಂದ ರೈತರಿಗೆ ಗ್ರಾಮ ಮಟ್ಟದ ತಾಂತ್ರಿಕ ಮಾಹಿತಿ ನೀಡಲಾಗುತ್ತದೆ. ಇಲಾಖೆ ಜೊತೆ ರೈತರು ಸಂಪರ್ಕ ಇಟ್ಟುಕೊಂಡು ಮಾಹಿತಿ ಪಡೆದು ಉತ್ತಮ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2012-13 ನೇ ಸಾಲಿನ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಚಿ. ಹೊಸಳ್ಳಿ ಸಿದ್ದೇಗೌಡ ಪ್ರಥಮ, ಉಮಾ ದೇವರಹಳ್ಳಿ ರಘು ದ್ವಿತೀಯ ಮತ್ತು ಕೆರೆಕೊಪ್ಪಲು ಕೆ.ವಿ.ವೆಂಕಟೇಶ್ ತೃತೀಯ ಸ್ಥಾನ ಪಡೆದರು. ತಾಂತ್ರಿಕ ವ್ಯವಸ್ಥಾಪಕ ಕೆ. ಟಿ. ಕಿಶೋರ್, ಕೃಷಿ ಅಧಿಕಾರಿ ವಿನಯ್, ಸಹಾಯಕ ಕೃಷಿ ಅಧಿಕಾರಿ ಗಂಗಾಧರ್ ಇದ್ದರು.
ಇಂದು ವಾರ್ಷಿಕ ಕ್ರೀಡಾಕೂಟ
ಹಾಸನ: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಡಿ. 27ರಂದು ಬೆಳಗ್ಗೆ 8ಕ್ಕೆ  ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಜೆ.ಎಸ್. ಸೋಮಶೇಖರ್ ಉದ್ಘಾಟಿಸುವರು.  ಸಮಾರೋಪ ಸಮಾರಂಭ ಡಿ. 29ರಂದು ಸಂಜೆ 4 ಕ್ಕೆ ನಡೆಯಲಿದ್ದು  ಮೈಸೂರು ದಕ್ಷಿಣ ವಲಯದ ಮಹಾ ನಿರೀಕ್ಷಕ ಡಾ.ಕೆ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂದು ಕೊರತೆ ಸಮಿತಿ ಸಭೆ ಇಂದು
ಹಾಸನ: ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ವರ್ಗದ ಕುಂದು ಕೊರತೆ ಸಮಿತಿ ಸಭೆಯು ಜಿಲ್ಲಾಧಿಕಾರಿ ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ಡಿ. 27ರಂದು ಬೆಳಗ್ಗೆ 11ಕ್ಕೆ  ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಸಭಾಂಗಣದಲ್ಲಿ ನಡೆಯಲಿದೆ.
ಅರಸೀಕೆರೆ ತಾ.ನಲ್ಲಿ  ವಿದ್ಯುತ್ ಇಲ್ಲ
ಅರಸೀಕೆರೆ: ತುರ್ತು ವಿದ್ಯುತ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅರಸೀಕೆರೆ ತಾಲೂಕಿನ   ಹಲವೆಡೆ  ಡಿ.27 ರಂದು  ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹಾಡಹಗಲೇ ಕಳವು
ಚನ್ನರಾಯಪಟ್ಟಣ: ಪಟ್ಟಣದ ನಾಗಸಮುದ್ರ ರಸ್ತೆಯಲ್ಲಿರುವ ಅಕ್ಷರ ದಾಸೋಹ ಅಧಿಕಾರಿ ರವಿಶಂಕರ್ ಎಂಬುವರ ಮನೆಯಲ್ಲಿ ಗುರುವಾರ ಹಾಡಹಗಲೇ ಕಳವು ಮಾಡಲಾಗಿದೆ. ಮನೆಯ ಮುಂಭಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು 45 ಗ್ರಾಂ ಚಿನ್ನಾಭರಣ ಮತ್ತು ಲ್ಯಾಪ್ಟ್ಯಾಪ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಎಂದಿನಂತೆ ರವಿಶಂಕರ್ ದಂಪತಿ ಮನೆಗೆ ಸಂಜೆ ಹಿಂತಿರುಗಿದಾಗ ಕಳವು ಮಾಡಿರುವುದು ತಿಳಿಯಿತು. ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement