ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ

Rashmi Kasaragodu
Updated On : 27 Dec 2013, 1:26 am

ಚನ್ನರಾಯಪಟ್ಟಣ:  ಬೆಂಗಳೂರು - ಮಂಗಳೂರು ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೈತರ ಗಮನಕ್ಕೆ ಬಾರದೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದನ್ನು ರಾಜ್ಯ ರೈತ ಸಂಘದ ತಾಲೂಕು ಘಟಕ ವಿರೋಧಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಆನೆಕೆರೆ ರವಿ ನೇತೃತ್ವದಲ್ಲಿ ಧರಣಿ ನಡೆಸಿ ಮಂಗಳೂರು ಬೆಂಗಳೂರು ಗ್ಯಾಸ್ ಪೈಪ್ಲೈನ್ ಅಳವಡಿಸಲು 2014ರ ಜನವರಿ 1ರಿಂದ ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವ ಎಚ್ಪಿಸಿಎಲ್ ಕಂಪನಿಯಾಗಲಿ, ಜಿಲ್ಲಾಧಿಕಾರಿಗಳಾಗಲಿ ತಾಲೂಕಿನ ರೈತರ ಜತೆ ಸಭೆ ನಡೆಸದೆ ಏಕಾಏಕಿ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿರುವುದನ್ನು ವಿರೋಧಿಸಿ ಧರಣಿ ನಡೆಸಿ ತಹಸೀಲ್ದಾರ್ ಡಾ.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಅಳವಡಿಸಿರುವ ಪೆಟ್ರೋಲಿಯಂ ಪೈಪ್ಲೈನ್ ಪಕ್ಕದಲ್ಲಿಯೇ ಗ್ಯಾಸ್ ಪೈಪ್ಲೈನ್ ಅಳವಡಿಸಲು ಕಂಪನಿ ಮುಂದಾಗಿದ್ದು, ಅಂದು ಸಹ ರೈತರಿಗೆ ವೈಜ್ಞಾನಿಕ ಬೆಲೆ ನೀಡಿಲ್ಲ. ಇಂದು ಮತ್ತೆ ಅದೇ ರೈತರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು, ಕಡೆ ಪಕ್ಷ ಸೌಜನ್ಯಕ್ಕಾಗಲೀ ರೈತರೊಂದಿಗೆ ಚರ್ಚಿಸದೆ ಮುಂದಾಗಿರುವುದು ಬೇಸರ ತಂದಿದೆ ಎಂದು ದೂರಿದರು.
ರೈತರಿಗೆ ವೈಜ್ಞಾನಿಕ ಬೆಲೆಯನ್ನು ನೀಡುವ ಜತೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಜಮೀನಿನಲ್ಲಿರುವ ತೆಂಗು ಹಾಗೂ ಇತರೆ ಮರಗಳಿಗೆ ಸೂಕ್ತ ಬೆಲೆ ನೀಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಾ.ನಾಗರಾಜು ಮಾತನಾಡಿ ಜಿಲ್ಲಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿ ಜತೆ ಚರ್ಚಿಸಿ ರೈತರ ಸಭೆ ಕರೆದು ತೀರ್ಮಾನಿಸಿದ ನಂತರ ಕಾಮಗಾರಿ ಪ್ರಾರಂಭಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ತಾಲೂಕು ರೈತ ಮುಖಂಡ ಮಂಜೇಗೌಡ, ಹರೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement