ಸರ್ಕಾರ ಸಹಾಯಧನದ ನಾನಾ ಯೋಜನೆ ಇನ್ನಷ್ಟು ಹೆಚ್ಚಿಸಲಿ: ಶಾಸಕ ರುದ್ರೇಶಗೌಡ
ಬೇಲೂರು: ರೈತರಿಗೆ ಸರ್ಕಾರ ಸಹಾಯಧನ ರೂಪದಲ್ಲಿ ನೀಡುವ ಯೋಜನೆಗಳನ್ನು ಇನ್ನಷ್ಟು ಹೆಚ್ಚಿಸ ಬೇಕು ಎಂದು ಶಾಸಕ ವೈ.ಎನ್.ರುದ್ರೇಶಗೌಡ ಹೇಳಿದರು. ಕೃಷಿ ಇಲಾಖೆ ಆಯೋಜಿಸಿದ್ದ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ ಜೋಳ ಮತ್ತು ಭತ್ತ ಬೆಳೆಗಳಿಗೆ ಬೆಂಬಲ ಬೆಲೆ ಘೊಷಿಸಿದ್ದು, ರೈತರು ಬೆಳೆದ ಎಲ್ಲಾ ಬೆಳೆಗೆ ಬೆಂಬಲ ಬೆಲೆ ಘೋಷಿಸಿದಾಗ ರೈತರ ಬಾಳು ಬೆಳಗಲಿದೆ ಎಂದ ಅವರು, ಬಹುಮುಖ್ಯವಾಗಿ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಬಹಳ ಅಗತ್ಯವಾಗಿದೆ ಎಂದು ನುಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಹೇಮಾವತಿ ಮಂಜುನಾಥ್ ಮಾತನಾಡಿ ಕೇಂದ್ರದ ಆತ್ಮ ಯೋಜನೆಯಡಿಯಲ್ಲಿ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ರೈತರಿಗೆ ವಿತರಿಸಲು ಅಧಿಕಾರಿಗಳು ಮುಂದೆ ಬರಬೇಕು ಎಂದ ಅವರು ಕೃಷಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ರೈತರಿಗೆ ಈ ಬಗ್ಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು. ತಾಲೂಕಿನ ಯಗಚಿ ಜಲಾಶಯದಿಂದ ಹಳೇಬೀಡು ಮಾದೀಹಳ್ಳಿ ಹೋಬಳಿಗಳಿಗೆ ನೀರು ಹರಿಸುವ ಯೋಜನೆಯನ್ನು ಶಾಸಕರು ತ್ವರಿತವಾಗಿ ಕೈಗೊಳ್ಳಬೇಕು ಎಂದ ಅವರು ಕೃಷಿ ಇಲಾಖೆ ರೈತರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮುಂದಾಗಬೇಕು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಟಿ.ಇಂದಿರಾ, ಬಿ.ಡಿ.ಚಂದ್ರೇಗೌಡ, ತಾಪಂ ಅಧ್ಯಕ್ಷೆ ಶಾಂತಮ್ಮ ಮಹದೇವಯ್ಯ, ಸದಸ್ಯರಾದ ಕಮಲಚನ್ನಪ್ಪ, ಸುಮಿತ್ರ ರುದ್ರಯ್ಯ, ಪವಿತ್ರ ಕೃಷಿಕ ಸಮಾಜದ ಅಧ್ಯಕ್ಷ ಜಯರಾಂ, ಆತ್ಮ ಯೋಜನೆಯ ಅಧಿಕಾರಿ ರಮೇಶ್, ರೈತ ಮುಖಂಡ ಕುಮಾರ್, ಚನ್ನೇಗೌಡ, ಶಿವೇಗೌಡ ಇದ್ದರು.