'ಅಟಲ್ ಜನ್ಮದಿನ ಬಿಜೆಪಿ ಪುಣ್ಯ ದಿನ'
ಕ.ಪ್ರ.ವಾರ್ತೆ ಆಲೂರು ಡಿ. 27
ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನ ನಮ್ಮ ಪಕ್ಷದ ಪುಣ್ಯ ದಿನವೆಂದು ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಬಿ.ಶಿವಪ್ಪ ಹೇಳಿದರು.
ಪಟ್ಟಣದ ಎಸ್‌ಬಿಎಂ ಕಟ್ಟಡದಲ್ಲಿ ಮಾಜಿ ಪ್ರಧಾನಿ ವಾಜಪೇಯಿ 90ನೇ ಜನ್ಮ ದಿನಾಚರಣೆ ಹಾಗೂ ನೂತನ ಬಿಜೆಪಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಹೆಸರೇ ಇಲ್ಲದ ಕಾಲದಲ್ಲಿ ನಾನು ಪಕ್ಷ ಸಂಘಟನೆ ಮಾಡಿದೆ. ನಮ್ಮ ಪಕ್ಷದ ಹೆಸರು ಕೇಳಿದರೆ ಜನ ನಗುತ್ತಿದ್ದರು. ಹೋದೆಡೆಯೆಲ್ಲ ಎಲ್ಲಿದೆ ಬಿಜೆಪಿ ಈ ಶತಮಾನದಲ್ಲಿ ಗೆಲ್ಲುವುದಿಲ್ಲ ಎಂದು ಕುಹಕವಾಡುತ್ತಿದ್ದರು. ಅಂಥ ಪಕ್ಷವನ್ನು ಜಿಲ್ಲೆಯಲ್ಲಿ ಪ್ರಕಾಶಮಾನವಾಗಿ ಬೆಳಗುವ ದೀಪದಂತೆ ಬೆಳಗಿಸಿದೆ. ಆದರೆ ಪಕ್ಷವಿಂದು ಮಂಕಾಗಿದೆ. ಮತ್ತೆ ಪ್ರಕಾಶಮಾನವಾಗಿ ಬೆಳಗಬೇಕಾದರೆ ಬಿಜೆಪಿ ಎಂಬ ಹೆಮ್ಮರ ನಳನಳಿಸಬೇಕಾದರೆ ಹಳೆ ಬೇರುಗಳಂತೆ ನಾವಿದ್ದೇವೆ, ಹೊಸ ಚಿಗುರಿನಂತೆ ಯುವ ಕಾರ್ಯಕರ್ತರು ಶ್ರಮಿಸಬೆಕು ಎಂದು ಹೇಳಿದರು.
ವಾಜಪೇಯಿ ಯಾವುದೇ ಒಂದು ಪಕ್ಷದ, ವರ್ಗದ ಅಥವಾ ಜಾತಿಯ ನಾಯಕರಲ್ಲ. ಭಾರತದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ಪ್ರಥಮ ಸ್ಥಾನದ ವ್ಯಕ್ತಿತ್ವವನ್ನು ಹೊಂದಿರುವ ಸರ್ವರೂ ಇಷ್ಟ ಪಡುವ ಅಜಾತ ಶತ್ರು ಎಂದು ಹೇಳಿದರು.
ದೇವೇಗೌಡರು ತಮ್ಮ ಭಾಷಣದಲ್ಲಿ ಇದು ನನ್ನ ಕಡೆಯ ಚುನಾವಣೆ ನನಗೆ ಇಷ್ಟವಿಲ್ಲ ವಯಸ್ಸಾಗಿದೆ. ಆದರೆ ಜನ ಬಿಡುವುದಿಲ್ಲವೆನ್ನುತ್ತಾರೆ ಹಾಗೆ ನೋಡಿದರೆ ನಾನು ದೇವೇಗೌಡರಿಗಿಂತ 4 ವರ್ಷ ದೊಡ್ಡವನು. ನಾನೂ ಸಹ ಇದು ನನ್ನ ಕಡೆಯ ಚುನಾವಣೆಯೆಂದು ಜನರ ಬಳಿಗೆ ಹೋಗುವೆಯೆಂದು ಚಟಾಕಿ ಹಾರಿಸಿದರು.
ನಂತರ ಏನೇ ಆಗಲಿ ಮಣ್ಣಿನ ಮಗನಾಗಿ ದಿಲ್ಲಿಯ ಪ್ರಧಾನಿ ಹುದ್ದೆಗೇರಿದ ದೇವೇಗೌಡರನ್ನು ಒಪ್ಪಲೇಬೇಕೆಂದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಲದಲ್ಲಿ ಅವರು ಹಾಸನ ಜಿಲ್ಲೆಯನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬಹುದಾಗಿತ್ತು. ಆದರೆ ಅವರು ಆ ರೀತಿ ಮಾಡದ ಕಾರಣ ಹಾಸನದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೇವಲ 3 ವರ್ಷ ಆಡಳಿತ ನಡೆಸಿದ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಪಡಿಸಬಹುದೆಂಬುದನ್ನು ಶಿವಮೊಗ್ಗ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ನುಡಿದರು. ಆಲೂರು ಕಟ್ಟಾಯ ಮಂಡಲ ಅಧ್ಯಕ್ಷ ಕೆ.ಆರ್.ಕಾಂತರಾಜ್ ಮಾತನಾಡಿ ವಾಜಪೇಯಿಯವರು ಲಾಲ್‌ಬಹದ್ದೂರ್ ಶಾಸ್ತ್ರೀಯವರ ನಂತರ ದೇಶ ಕಂಡ ಅತ್ಯುತ್ತಮ ಪ್ರಧಾನಿ. ಅವರು ಅನಾರೋಗ್ಯ ಪೀಡಿತರಾಗಿದ್ದು ಶೀಘ್ರ ಗುಣ ಮುಖರಾಗಿ ಸಕ್ರಿಯ ರಾಜಕಾರಣಕ್ಕೆ ಮರಳಬೇಕೆಂಬುದು ನಮ್ಮ ಮಹದಾಸೆ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ. ದೇಶ ಕಂಡ ಮಹಾನ್ಮುತ್ಸದ್ದಿಯ ಹುಟ್ಟು ಹಬ್ಬ ಆಚರಿಸುತ್ತಿರುವುದು ನಮಗೆಲ್ಲ ಸಂತಸದ ವಿಷಯ ಎಂತಲೂ ಹೇಳಿದರು. ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ನೇತ್ರ, ಆರೋಗ್ಯ ಹಾಗೂ ರಕ್ತ ಪರೀಕ್ಷೆಯನ್ನು ಜಿಲ್ಲಾ ಉಪಾಧ್ಯಕ್ಷ ಡಾ.ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ರೇಣುಕುಮಾರ್, ಉದಯಕುಮಾರ್, ಭಾಸ್ಕರ್, ಕೆ.ಆರ್.ಲೋಕೇಶ್, ಹೊನ್ನವಳ್ಳಿ ಗಣೇಶ್, ಎ.ಎಚ್.ರಮೇಶ್, ಡಾ..ಜಯರಾಜ್, ಶಕ್ತಿ ಕೇಂದ್ರದ ಅಧ್ಯಕ್ಷ ಪೀತಾಂಬರ್, ನಂದಕುಮಾರ್, ಹೇಮಂತ್, ದೇವರಾಜು ಇದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಪೂವಯ್ಯ ಸ್ವಾಗತಿಸಿದರು. ಪಿ.ಎಲ್.ಶೇಖರ್ ವಂದಿಸಿದರು.