ಅಮಾನತು ನಿರ್ಣಯಿಸಿದವರೇ ಪಕ್ಷ ವಿರೋಧಿ
ಹಾಸನ: ತಮ್ಮನ್ನು ಸೇರಿದಂತೆ ಕಾಂಗ್ರೆಸ್ನ ಮೂವರು ಮುಖಂಡರನ್ನು ಅಮಾನತು ಮಾಡುವಂತೆ ಕೆಪಿಸಿಸಿಗೆ ಶಿಫಾರಸು ಮಾಡುವ ನಿರ್ಣಯ ತೆಗೆದುಕೊಂಡ ಸಭೆಯಲ್ಲಿ ಇದ್ದವರು ಪಕ್ಷ ವಿರೋಧಿಗಳು. ಅಂತವರು ತೆಗೆದುಕೊಂಡ ತೀರ್ಮಾನಕ್ಕೆ ನಯಾಪೈಸೆ ಕಿಮ್ಮತ್ತು ಇಲ್ಲ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಮ್ಮನ್ನು ಮತ್ತು ರಾಜೀವ್ಗಾಂಧಿ ಪಂಚಾಯತ್ ರಾಜ್ ಘಟಕದ ಅಧ್ಯಕ್ಷ ಸಿ.ವಿ. ರಾಜಪ್ಪ ಮತ್ತು ಜಿಲ್ಲಾ ಎಸ್ಪಿ, ಎಸ್ಟಿ ಘಟಕದ ಅಧ್ಯಕ್ಷ ಡಿ.ಸಿ. ಸಣ್ಣಸ್ವಾಮಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕೆಂದು ನಿರ್ಣಯ ಕೈಗೊಂಡಿರುವುದು ಏಕಪಕ್ಷೀಯ ಮತ್ತು ಸರ್ವಾಧಿಕಾರಿ ಧೋರಣೆ. ಸಭೆಯಲ್ಲಿ ಇದ್ದವರು ಶಿವರಾಂ ಅವರಿಂದ ಶೋಷಣೆಗೆ ಒಳಗಾದವರೇ. ಭಯದಿಂದ ಶಿವರಾಂ ವಿರುದ್ಧ ದನಿ ಮಾಡಿಲ್ಲ ಎಂದು ಶೇಷೇಗೌಡರು ಟೀಕಿಸಿದ್ದಾರೆ.
ಎಐಸಿಸಿ ನಿಯಮದ ಪ್ರಕಾರವೇ 3 ಚುನಾವಣೆಗಳಲ್ಲಿ ಸೋತವರು ಪಕ್ಷದ ಯಾವುದೇ ಹುದ್ದೆಯನ್ನು ಹೊಂದುವಂತಿಲ್ಲ. ಆದರೆ ಶಿವರಾಂ ಅವರು ಜಿಲ್ಲಾಧ್ಯಕ್ಷ ಸ್ಥಾನ ಹೊಂದಿದ್ದಾರೆ.
ಅರಸೀಕೆರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪಕ್ಷಕ್ಕಾಗಿ ಕಾಯ, ವಾಚಾ, ಮನಸಾ ದುಡಿಯುತ್ತಿದ್ದ ಚಂದ್ರಕಲಾ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಶಿವರಾಂ ಚುನಾವಣೆಯಲ್ಲಿ ಸೋತ ಕೂಡಲೇ ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಚಂದ್ರಕಲಾ ಅವರನ್ನು ಮುಂದುವರಿಸಿದೇ ಮಹಿಳಾ ವಿರೋಧಿತನ ಪ್ರದರ್ಶಿಸಿದರು ಎಂದು ಆರೋಪಿಸಿದ್ದಾರೆ.
ಪಕ್ಷದ ವಿರುದ್ಧ ಮಾತನಾಡಿಲ್ಲ: ಘಟಕದ ಸಭೆಯಲ್ಲಿ ಶಿವರಾಂ ಅಧ್ಯಕ್ಷತೆ ಖಂಡಿಸಿದ್ದೇವೆ ಹೊರತು ಪಕ್ಷವನ್ನು ಟೀಕಿಸಿಲ್ಲ. ಬಿಜೆಪಿ, ಜೆಡಿಎಸ್ ಸಭೆಯಲ್ಲೇನು ಭಾಗವಹಿಸಿಲ್ಲ. ಆದರೆ ಶಿವರಾಂ ತಮ್ಮನ್ನು ಸೇರಿದಂತೆ ಮೂವರು ಮುಖಂಡರನ್ನು ಅಮಾನತು ಪಡಿಸಬೇಕೆಂದು ಒತ್ತಾಯಿಸಿರುವುದು ದಬ್ಬಾಳಿಕೆ ಮತ್ತು ಸರ್ವಾಧಿಕಾರಿ ನೀತಿಯೇ ಹೊರತು ಬೇರೇನು ಅಲ್ಲ. ಜಿಲ್ಲೆಯ 14 ಬ್ಲಾಕ್ ಅಧ್ಯಕ್ಷರ ಪೈಕಿ ಒಬ್ಬರೂ ಎಸ್ಸಿ, ಎಸ್ಟಿ ವ್ಯಕ್ತಿ ಇಲ್ಲ. ಒಂದು ಬ್ಲಾಕಿಗೂ ಮಹಿಳಾ ಅಧ್ಯಕ್ಷರನ್ನು ನೇಮಿಸಿಲ್ಲ. ಹೀಗೆ ಶಿವರಾಂ ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದಾರೆ ಎಂದು ಸಹ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವರಾಂ ಅವರು ಜಿಲ್ಲಾಧ್ಯಕ್ಷರಾಗಿ ಇರುವವರೆಗೂ ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗುವುದಿಲ್ಲ. ಶಿವರಾಂ ಮೂರು ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
2008 ರಲ್ಲಿ ಹಾಸನ ಕ್ಷೇತ್ರದಿಂದ ದಾಸ ಗೌಡರಿಗೆ ಟಿಕೆಟಟ್ನೀಡದೇ ತಾವೇ ಸ್ಪರ್ಧಿಸಿ ಸೋತರು. ಇದರಿಂದ ಒಂದು ವರ್ಗ ಕಾಂಗ್ರೆಸ್ಗೆ ವಿರೋಧವಾಯಿತು ಎಂದು ಶೇಷೇಗೌಡ ಈ ಸಂದರ್ಭದಲ್ಲಿ ಹೇಳಿದ್ದಾರೆ.