ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾನೂನು ಚೌಕಟ್ಟಿನಲ್ಲಿ ನೆರವಿಗೆ ಜಿಲ್ಲಾಡಳಿತ ಬದ್ಧ

Mainashree
Updated On : 27 Dec 2013, 9:30 am

ಕನ್ನಡಪ್ರಭ ವಾರ್ತೆ ಹಾಸನ ಡಿ 27
ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಭರವಸೆ ನೀಡಿದ್ದಾರೆ.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ  ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟರ ಸಮಸ್ಯೆಗಳ ಬಗೆಹರಿಸಲು ಜಿಲ್ಲಾಡಳಿತ ಸಂಪೂರ್ಣ ಪ್ರಯತ್ನ ಮಾಡಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
 ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಆ ಮೂಲಕ ಬಡ ಶೋಷಿತ ಜನಸಮುದಾಯ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢವಾಗಬೇಕು.
  ಎಲ್ಲಾ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮಾರ್ಗಸೂಚಿಯಂತೆ ನಿಗದಿಪಡಿಸಿರುವ 22.75 ಪರಿಶಿಷ್ಟ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಖರ್ಚು ಮಾಡಲೇಬೇಕು ಮತ್ತು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಯೋಜನೆಗಳು ಸಕಾಲದಲ್ಲಿ ಅರ್ಹರನ್ನು ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.   
ತಕ್ಷಣವೇ ಪರಿಹಾರ ಕಷ್ಟಕರ: ಸಭೆಯಲ್ಲಿ ತಾಲೂಕುವಾರು ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಭೂಮಿಗೆ ಸಂಬಂಧಿಸಿದ ವಿಷಯಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಕಷ್ಟ. ಇವುಗಳಿಗೆ ದಾಖಲೆಗಳನ್ನು ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೆಲವೊಂದು ವಿಚಾರಗಳು ಸರ್ಕಾರದ ಮಟ್ಟದಲ್ಲಿ ತೀರ್ಮಾನಗೊಳ್ಳಬೇಕಾಗುತ್ತದೆ.  ನಗರದ ತಹಸೀಲ್ದಾರ್ ಕಚೇರಿ ಹಿಂಭಾಗ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ 7 ಗುಂಟೆ ಜಾಗವನ್ನು ಜಗಜೀವನರಾಂಭವನ ನಿರ್ಮಾಣಕ್ಕಾಗಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
 ಅಲ್ಲಿಂದ ಅನುಮತಿ ಬಂದ ನಂತರ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
 ಅನೇಕ ವರ್ಷಗಳಿಂದ  ನೆನೆಗುದಿಗೆ ಬಿದ್ದಿದ್ದ ಗಂಗೂರು ಜೀವ ವಿಮುಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಜಮೀನು ಒದಗಿಸಿದ್ದಕ್ಕಾಗಿ ದಲಿತ ಸಂಘಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿದರು.
 ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಹಲವು ವರ್ಷಗಳ ಹಿಂದಿನಿಂದ ಕೊರೆಸಲಾಗಿರುವ ಕೊಳವೆ ಬಾವಿಗಳಿಗೆ ಮುಂಬರುವ ಮಾರ್ಚ್ 2014ರ ಅಂತ್ಯದ ವೇಳೆಗೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಒದಗಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸವಲತ್ತುಗಳ ವಿತರಣೆ ವೇಳೆ ಸರಳ ಕಾರ್ಯಕ್ರಮಗಳನ್ನು ಮಾಡಿ ಸೂಕ್ತ ಪ್ರಚಾರವನ್ನು ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಮತ್ತು ಸೌಲಭ್ಯ ವಿತರಣೆಗಳು ಪಾರದರ್ಶಕವಾಗಿರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
 ಪರಿಶಿಷ್ಟ ಜಾತಿ ಮತ್ತು ವರ್ಗದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ತಾ. ಸಮಾಜ ಕಲ್ಯಾಣ ಅಧಿಕಾರಿಗಳು ಅಭ್ಯರ್ಥಿ ಮನೆಗೆ ತೆರಳಿ ಮಹಜರು ಮಾಡಿ ಫೋಟೋ ಸಹಿತ ವರದಿ ನೀಡಿದಲ್ಲಿ ಯಾವುದೇ ವಿಳಂಬವಿಲ್ಲದೆ ಜಿಲ್ಲಾಧಿಕಾರಿ ಕಚೇರಿಯಿಂದ ದೃಢೀಕರಣ ಪತ್ರ ನೀಡಲಾಗುವುದು. ಜಿಲ್ಲಾ ಪಂಚಾಯ್ತಿ ಮೂಲಕ ನಾನಾ ಯೋಜನೆಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯವರು ವಾಸಿಸುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ:   ದಲಿತರು ವಾಸಿಸುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ಜವಾಬ್ದಾರಿಯನ್ನು ಆಯಾಯ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲುಕು ಪಂಚಾಯ್ತಿ, ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚನೆ ನೀಡಿದರು.
 ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಮನೆಗಳಿಗೆ ಶೌಚಾಲಯಗಳ ನಿರ್ಮಾಣ ಯೋಜನೆಗಳಿಗಾಗಿ ಅನುಮೋದನೆ ನೀಡಲಾಗಿದೆ. ಯುಜಿಡಿ ಸಂಪರ್ಕ ಪಡೆಯುವ ಶೌಚಾಲಯಗಳಿಗೆ ತಲಾ 15 ಸಾವಿರ ಹಾಗೂ ಶೌಚಗುಂಡಿ ನಿರ್ಮಾಣವಾಗುವ ಶೌಚಾಲಯಗಳಿಗೆ ತಲಾ 25 ಸಾವಿರ ರು. ಅನುದಾನ ಒದಗಿಸಲಾಗುವುದು ಪ್ರತಿಯೊಬ್ಬರೂ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಯಲು ಮಲ ವಿಸರ್ಜನೆಗೆ ಮುಕ್ತಿ ಹಾಡಬೇಕು ಎಂದು ತಿಳಿಸಿದರು.
ಕುಡಿವ ನೀರಿನ ಸೌಲಭ್ಯ:   ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದವರು ವಾಸಿಸುವ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಎಲ್ಲಾ ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲಾಗುವುದೆಂದು ಹೇಳಿದರು.
 ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಮಾತನಾಡಿ, ಪರಿಶಿಷ್ಟ ಜಾತಿ ವರ್ಗದವರ ಮೇಲೆ ದೌರ್ಜನ್ಯ ಸಂದರ್ಭದಲ್ಲಿ ಇಲಾಖೆಯು ಎಲ್ಲಾ ರೀತಿಯ ರಕ್ಷಣೆ ಒದಗಿಸಲಿದೆ ಅಲ್ಲದೆ ವೈಯುಕ್ತಿಕವಾಗಿ ಬೇರೆ ರೀತಿಯ ಆತಂಕ ಹಾಗೂ ಕಾನೂನಿನ ಸಮಸ್ಯೆ ಎದುರಿಸುತ್ತಿರುವವರಿಗೂ ಪೊಲೀಸ್ ಇಲಾಖೆ ನೆರವಾಗಲಿದೆ ಎಂದರು.
 ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್ ಅವರು, ಹಿಂದಿನ ಸಭೆಯ ನಡವಳಿಯನ್ನು ಮಂಡಿಸಿ ನಾನಾ ಕಡೆ ಪ್ರಗತಿಯಲ್ಲಿ ಇರುವ ಕಾಮಗಾರಿಗಳ ಬಗ್ಗೆ ಸಭೆಗೆ ವಿವರ ಒದಗಿಸಿದರು.
 ನಾನಾ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿಯವರು ಎದುರಿಸುತ್ತಿರುವ ಹಲವು ಬಗೆಯ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಮುದಾಯದ ಮುಖಂಡ ಸಂದೇಶ್, ಈರಪ್ಪ, ಜಜರಾಂ, ನಾರಾಯಣದಾಸ್, ಕೃಷ್ಣಾದಾಸ್, ಹೆತ್ತೂರು ನಾಗರಾಜ್, ಸೋಮಶೇಖರ್, ವಿಜಯಕುಮಾರ್, ರಾಜೇಶ್, ರಂಗನಾಥ್, ನಿರ್ವಾಣಯ್ಯ ಮತ್ತಿತರರು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಜಿಪಂ ಉಪಕಾರ್ಯದರ್ಶಿ ಕರಿಯಪ್ಪ, ಸಕಲೇಶಪುರ ಉಪವಿಭಾಗಾಧಿಕಾರಿ ಮಧುಕೇಶ್ವರ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ತಹಸೀಲ್ದಾರರು, ನಾನಾ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement