ಜಿಲ್ಲೆಯಲ್ಲಿ ಜ. 4ರಿಂದ 9ರವರೆಗೆ ಮಕ್ಕಳ ಚಲನಚಿತ್ರೋತ್ಸವ
ಕ.ಪ್ರ.ವಾರ್ತೆ ಹಾಸನ ಡಿ. 27
ಜಿಲ್ಲೆಯಲ್ಲಿ ಜನವರಿ 4 ರಿಂದ 9ರ ವರೆಗೆ ಮಕ್ಕಳ ಚಲನಚಿತ್ರೋತ್ಸವ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಚಿತ್ರಮಂದಿರ ಮಾಲಿಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ನಾನಾ ತಾಲೂಕುಗಳ 23 ಚಲನಚಿತ್ರ ಮಂದಿರಗಳಲ್ಲಿ ಕಂಸಾಳೆ ಕೈಸಾಳೆ, ನೂರಾರು ಕನಸು ಎಂಬ ಚಿತ್ರಗಳು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಪ್ರದರ್ಶನಗೊಳ್ಳಲಿವೆ. ಹಾಸನದ ಭಾನು ಚಿತ್ರಮಂದಿರದಲ್ಲಿ ಜನವರಿ 4ರಂದು ಮಕ್ಕಳ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಆಯಾಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಚಿತ್ರಮಂದಿರಗಳಿಗೆ ಭೇಟಿ ನೀಡಿ ಆಸನ ವ್ಯವಸ್ಥೆಗಳನ್ನು ಪರಿಶೀಲಿಸಿ ಶಾಲಾ ಮಕ್ಕಳ ಸಂಖ್ಯೆಗನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ.
ಪ್ರತಿ ವಿದ್ಯಾರ್ಥಿಗೆ 10 ರು.ನಂತೆ ಟಿಕೆಟ್ ನಿಗದಿ ಪಡಿಸಲಾಗಿದೆ. ಯು.ಎಫ್.ಒ. ಮೂಲಕ ಚಿತ್ರ ಪ್ರದರ್ಶಿಸಲು ಚಿತ್ರಮಂದಿರದ ಮಾಲೀಕರು ತಮ್ಮ ಹಾರ್ಡ್ ಡಿಸ್ಕ್‌ಗಳನ್ನು ಬೆಂಗಳೂರು ಯು.ಎಫ್.ಒ.ಕಚೇರಿಗೆ ಕಳುಹಿಸಿ ಡೌನ್‌ಲೋಡ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಸನ ನಗರದ ಭಾನು, ಶ್ರೀಗುರು ಚಿತ್ರಮಂದಿರಗಳಲ್ಲಿ ಕಂಸಾಳೆ-ಕೈಸಾಳೆ, ಎಸ್‌ಬಿಜಿ, ಸಹ್ಯಾದ್ರಿ, ಪೃಥ್ವಿ, ಪಿಚ್ಚರ್ ಪ್ಯಾಲೇಸ್ ಚಿತ್ರಮಂದಿರಗಳಲ್ಲಿ ನೂರಾರು ಕನಸು ಚಿತ್ರ ಪ್ರದರ್ಶನಗೊಳ್ಳಲಿವೆ.
ಸಕಲೇಶಪುರದ ಗಾಯಿತ್ರಿ ಚಿತ್ರಮಂದಿರದಲ್ಲಿ ಕಂಸಾಳೆ-ಕೈಸಾಳೆ, ತೇಜಸ್ವಿನಿ ಚಿತ್ರಮಂದಿರದಲ್ಲಿ ನೂರಾರು ಕನಸು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅರಸೀಕೆರೆಯ ಸಾಧನ ಮತ್ತು ಶ್ರೀ ರತ್ನ ಚಿತ್ರಮಂದಿರಗಳಲ್ಲಿ ಮತ್ತು ಬಾಣಾವರದ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನೂರಾರು ಕನಸು ಚಿತ್ರ ಪ್ರದರ್ಶನವಿದೆ.
ಚನ್ನರಾಯಪಟ್ಟಣದ ಬಾಲಾಜಿ, ಮತ್ತು ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಕಂಸಾಳೆ-ಕೈಸಾಳೆ, ಗಾಯಿತ್ರಿ ಮತ್ತು ಧನಲಕ್ಷ್ಮಿ ಚಿತ್ರಮಂದಿರಗಳಲ್ಲಿ ನೂರಾರು ಕನಸು, ಹಿರೀಸಾವೆಯ ಶ್ರೀ ಚಿತ್ರಮಂದಿರದಲ್ಲಿ ಕಂಸಾಳೆ-ಕೈಸಾಳೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಹೊಳೆನರಸೀಪುರದ ಎಸ್.ಎಲ್.ಎನ್. ನಲ್ಲಿ ಕಂಸಾಳೆ-ಕೈಸಾಳೆ, ಚೆನ್ನಾಂಬಿಕಾ ಚಿತ್ರಮಂದಿರದಲ್ಲಿ ನೂರಾರು ಕನಸು ಚಿತ್ರ ಪ್ರದರ್ಶನವಾಗುವುದು.
ಅರಕಲಗೂಡಿನ ಮಂಜುನಾಥ ಮತ್ತು ಮಹದೇಶ್ವರ ಚಿತ್ರಮಂದಿರಗಳಲ್ಲಿ ನೂರಾರು ಕನಸು, ಕೇರಳಾಪುರದ ಮಂಜುನಾಥ ಚಿತ್ರಮಂದಿರದಲ್ಲಿ ಕಂಸಾಳೆ-ಕೈಸಾಳೆ, ಬಸವಾಪಟ್ಟಣದ ಮಹದೇಶ್ವರ ಚಿತ್ರಮಂದಿರದಲ್ಲಿ ನೂರಾರು ಕನಸು ಮತ್ತು ಬೇಲೂರು ರೇಣುಕಾ ಚಿತ್ರಮಂದಿರದಲ್ಲಿ ಕಂಸಾಳೆ ಕೈಸಾಳೆ ಚಿತ್ರಗಳು ಪ್ರದರ್ಶನಗೊಳ್ಳಲಿದೆ.