'ರಾಜಕೀಯೇತರ ಸಂಘಟನೆ ಆಶಯ'
ಚನ್ನರಾಯಪಟ್ಟಣ: ರಾಜ್ಯ ಒಕ್ಕಲಿಗರ ಸಂಘ ರಾಜಕೀಯೇತರ ಸಂಘಟನೆಯಾಗ ಬೇಕೆಂಬುದು ತಮ್ಮ ಆಶಯ. ಇದರಲ್ಲಿ ರಾಜಕೀಯ ಪ್ರವೇಶ ಸರಿಯಿಲ್ಲ ಎಂದು ಒಕ್ಕಲಿಗರ ಸಂಘದ ಸ್ಪರ್ಧಿ ಬಿ.ಪಿ ಮಂಜೇಗೌಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಕ್ಕೆ ಒಕ್ಕಲಿಗ ಜಾತಿಯವರು ಯಾರಾದರೂ ಸ್ಪರ್ಧಿಸಲು ಮುಕ್ತ ಅವಕಾಶವಿದೆ ಎಂದ ಅವರು, ಮಾಜಿ ಸಚಿವ ಎಚ್.ಡಿ ರೇವಣ್ಣ ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ತಾವೊಬ್ಬ ಸರ್ಕಾರಿ ನೌಕರ, ಆದರೆ ತಮಗೆ ತಮ್ಮ ಸಮುದಾಯದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ದಬ್ಬಾಳಿಕೆ ರಾಜಕೀಯ ನಡೆಯುವುದಿಲ್ಲ. ಎಲ್ಲರಿಗೂ ಬದುಕಲು ಸಮಾನ ಹಕ್ಕಿದೆ. ಈ ನಿಟ್ಟಿನಲ್ಲಿ ರೇವಣ್ಣ ತಿಳಿದು ಮಾತನಾಡುವುದು ಸೂಕ್ತ ಎಂದು ಅವರು ನುಡಿದರು.
ಸಂಘದ ಸದಸ್ಯರಾಗಿರುವವರಿಗೆ ಗುರುತಿನ ಪತ್ರ ನೀಡಿದ್ದು, ಅವುಗಳಲ್ಲಿ ಕೆಲವು ಕಾರ್ಡ್‌ಗಳನ್ನು ರಾಜಕಾರಣಿಗಳು ಕಸಿದುಕೊಂಡು ಮತದಾರರನ್ನು ತಮ್ಮ ಮುಷ್ಟಿಯಲ್ಲಿಟ್ಟು ಕೊಳ್ಳುವತ್ತಾ ಮುಂದಾಗಿದ್ದಾರೆ ಅದು ನಡೆಯುವುದಿಲ್ಲ ಎಂದು ಹೇಳಿದರು.
ಒಕ್ಕಲಿಗರ ಸಂಘವನ್ನು ಜಿಲ್ಲೆ ತಾಲೂಕು ಮಟ್ಟಕ್ಕೆ ತರುವ ಯತ್ನ ತಮ್ಮದಾಗಿದ್ದು, ಸಂಘವನ್ನು ರಾಜದಾನಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ತೋರಿಸುವುದು ತಮ್ಮ ಕರ್ತವ್ಯವಾಗಿದ್ದು, ಐಎಎಸ್ಸೇರಿದಂತೆ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು. ಒಕ್ಕಲಿಗರ ಸಂಘ ನಿರ್ದೇಶಕ ಸ್ಥಾನದ ಸ್ಪರ್ಧಿ ಅಣ್ಣೇಗೌಡ, ಒಕ್ಕಲಿಗ ಮುಖಂಡರಾದ ಯೋಗಣ್ಣ, ಶಾಂತಣ್ಣ ಮೊದಲಾದವರು ಭಾಗವಹಿಸಿದ್ದರು.