ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ಸಿಬ್ಬಂದಿ ಸ್ಥಿತಿಯೇ ಇಲ್ಲಿ ರೋಗಗ್ರಸ್ತ

Rashmi Kasaragodu
Updated On : 29 Dec 2013, 1:30 am

ಟಿ ಪಿ. ಶಾಂತಿಕುಮಾರ್
ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿರುವ ವಸತಿಗೃಹಗಳು ಇಂದಿಗೂ ದುರಸ್ಥಿ ಕಾಣದೆ ಇಲ್ಲಿ ವಾಸವಿರುವ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆತಂಕದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಇದು ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂಬ ಆರೋಪಗಳು ಕೇಳಿಬರುತ್ತಿದೆ.
ಕಳೆದ 6-7 ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಈ ಆಸ್ಪತ್ರೆಯ ವಸತಿ ಗೃಹಗಳು ಇಂದು ಅವಸಾನದ ಅಂಚಿಗೆ ಬಂದು ನಿಂತಿವೆ.
ಆರ್.ಸಿ.ಸಿ. ಮೇಲ್ಛಾವಣಿ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ, ಆರ್.ಸಿ.ಸಿ.ಗೆ ಹಾಕಿರುವ ಕಬ್ಬಿಣದ ಸರಳುಗಳು ಕಾಣತೊಡಗಿವೆ. ಹಾಗೆಯೇ, ಇನ್ನಿತರ ವಸತಿ ಗೃಹಗಳ ಹಂಚುಗಳು ಪುಡಿಯಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ವಸತಿ ಗೃಹಗಳಲ್ಲಿ ನೀರು ನಿಲ್ಲುವಂತಾಗಿದೆ.
ನವಜಾತ ಶಿಶುಗಳಿಗೆ ಸೋಂಕುಗಳು ಬರದಂತೆ ಇ.ಸಿ.ಜಿ. ಹಾಗೂ ಇನ್ನಿತರೆ ಚುಚ್ಚುಮದ್ದು ಹಾಕುವ ಕೊಠಡಿ ಸಂಜೆಯಾಯಿತೆಂದರೆ ಮಧ್ಯಪಾನ ಮಾಡುವವರಿಗೆ ಸ್ಥಳಾವಕಾಶ ಕಲ್ಪಿಸಿ ಆನಂತರ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಮೂಗು ಮುಚ್ಚಿ ಓಡಾಡಬೇಕು: ಈ ವಸತ ಗೃಹಗಳ ಅಕ್ಕ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದಾಗಿ ಹಾವು-ಚೇಳು, ಇಲಿ, ಹೆಗ್ಗಣಗಳ ತಾಣವಾಗಿದೆ. ವಸತಿ ಗೃಹಗಳಿಗೆ ಹೊಂದಿಕೊಂಡಂತೆ ಖಾಸಗಿ ಕ್ಲಿನಿಕ್ ಇದ್ದು ಇಲ್ಲಿ ಬಳಕೆಯಾಗುವ ಸಿರೆಂಜ್ ಮತ್ತಿತರೆ ಸಾಮಗ್ರಿಗಳನ್ನು ಮನ ಬಂದಂತೆ ಎಸೆದಿರುವುದು ಒಂದೆಡೆಯಾದರೆ, ಇಲ್ಲಿಯೇ ಕೋಳಿ ಅಂಗಡಿ, ಹೋಟೆಲ್ಗಳ ತ್ಯಾಜ್ಯ ಸಂಗ್ರಹಗೊಂಡಿದ್ದು ಸುತ್ತಮುತ್ತಲಿನ ಪ್ರದೇಶ ಕೊಳಚೆ ಪ್ರದೇಶವಾಗಿ ಪರಿವರ್ತನೆಗೊಂಡಿದೆ. ಇದರ ದುರ್ವಾಸನೆಯಿಂದ ಜನರು ಮೂಗು ಮುಚ್ಚಿ ಓಡಾಡುವಂತಹ ದುಸ್ಥಿತಿ ಎದುರಾಗಿದೆ.
ಪ್ರವೇಶ ದ್ವಾರ ಮುರಿದುಬಿದ್ದಿದೆ: ವಸತಿ ಗೃಹಗಳ ಆವರಣದಲ್ಲಿಯೇ ಕೆಲವರು ದನಗಳನ್ನು ಕಟ್ಟಿ ಅಶುಚಿತ್ವ ಉಂಟಾಗಲು ಅವಕಾಶ ಕಲ್ಪಿಸಿದ್ದಾರೆ. ಕೆಲ ಸಂದರ್ಭದಲ್ಲಿ  ಬೀಡಾಡಿ ದನಗಳು ಕೂಡ ಈ ಆವರಣವನ್ನೆ ಆಶ್ರಯ ತಾಣವನ್ನಾಗಿ ಮಾಡಿಕೊಂಡಿವೆ. ಇದು ಸಾಲದೆಂಬಂತೆ ಕೆಲ ಖಾಸಗಿ ವ್ಯಕ್ತಿಗಳು ವಸತಿ ಗೃಹಗಳ ಸುತ್ತ ನಿರ್ಮಿಸಿರುವ ತಡೆ ಗೋಡೆಯ ಮೇಲೆಯೇ ಹೋಟೆಲ್ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಈ ಹಿಂದೆ ಹೊಸದಾಗಿ ಹಾಕಲಾಗಿದ್ದ ಪ್ರವೇಶ ದ್ವಾರ ಮುರಿದು ಬಿದ್ದಿದೆ. ಇನ್ನಾದರೂ, ಸಂಬಂದಿಸಿದ ಇಲಾಖೆಯ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ವಸತಿ ಗೃಹಗಳ ದುರಸ್ತಿಗೆ ಹಾಗೂ ಅಲ್ಲಿ ವಾಸವಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಉತ್ತಮ ಸೌಲಭ್ಯ ಒದಗಿಸಿಕೊಡುವರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಅವ್ಯವಸ್ಥೆಯ ಬಗ್ಗೆ ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಅವ್ಯವಸ್ಥೆ ಉಂಟಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ಉತ್ತಮ ಸೌಲಭ್ಯ ಕಲ್ಪಿಸದಿದ್ದರೆ, ಜಿಲ್ಲಾ ಆರೋಗ್ಯ ಕೇಂದ್ರದ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement