ಸಿಮೆಂಟ್ ಹಾಕಿ ಪುಣ್ಯ ಕಟ್ಕಳಿ...
ದಯಾಶಂಕರ ಮೈಲಿ
ಹಾಸನ: ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರೆಲ್ಲರೂ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ಸದ್ಯದಲ್ಲೇ ದುರಸ್ತಿ ಪಡಿಸಲಾಗುವುದು ಎಂದು ಭರವಸೆ ನೀಡಿದರೇ ಹೊರತು ಯಾವುದನ್ನೂ ಕಾರ್ಯಗತಗೊಳಿಸಲಿಲ್ಲ.
ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಘಾಟಿ ರಸ್ತೆಯಲ್ಲಿ ಪ್ರಯಾಣಿಸುವ ಮಂದಿ ಜೀವ ಕೈಲಿ ಹಿಡಿದು ಸಂಚರಿಸಬೇಕಾಗಿದೆ. ರಸ್ತೆಯಲ್ಲಿರುವ ದೊಡ್ಡ ಹಳ್ಳಗಳಿಂದ ಚಾಲಕರು ಸಮತೋಲನ ಕಳೆದುಕೊಂಡು ಘಾಟಿ ಪ್ರಪಾತಕ್ಕೆ ಉರುಳಿ, ಅನೇಕ ಮಂದಿ ಪ್ರಾಣ ಕಳೆದುಕೊಂಡಿರುವುದುಂಟು.
2002ರಿಂದಲೂ ನಾನಾ ಸಂಘಟನೆಗಳು ಶಿರಾಡಿ ಘಾಟ್ ರಸ್ತೆ ದುರಸ್ತಿಗಾಗಿ ಒಂದಲ್ಲಾ ಒಂದು ರೀತಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರಿಗೆ ಮನವಿ ನೀಡಿವೆ. ಆದರೆ ಮನವಿಗಳು ಕಸದ ಬುಟ್ಟಿಗೆ ಸೇರಿದವೇ ಹೊರತು ರಸ್ತೆ ರಿಪೇರಿಯಾಗಲಿಲ್ಲ.
ಸುಬ್ರಹ್ಮಣ್ಯದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು, ಶಿರಾಡಿ ಉಳಿಸಿ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಆಗ್ರಹಿಸಿದ್ದರಲ್ಲದೆ, ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗ್ಗಡೆ ಕೂಡ ಶಿರಾಡಿ ರಸ್ತೆ ಉಳಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಕ್ಷೇತ್ರದ ಮುಖಂಡರು ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದ್ದರು.
ಇದರ ಫಲವಾಗಿ 34 ಕಿ.ಮೀ ಉದ್ದವಿರುವ ಶಿರಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ 13 ತಿರುವುಗಳಲ್ಲಿ ಮಾತ್ರ ಕಾಂಕ್ರೀಟ್ ಮಾಡಲಾಯಿತು.
ಕಾಮಗಾರಿ ಕಳಪೆಯಿಂದ ಕೂಡಿದ್ದರಿಂದ ಕೆಲವೇ ತಿಂಗಳಲ್ಲಿ ಮತ್ತೆ ಗುಂಡಿಗಳು ಕಾಣಿಸಿಕೊಂಡವು.
ಮಳೆಗಾಲದಲ್ಲಿ ಡಾಂಬರೀಕರಣ: 4.44 ಕೋಟಿ ವೆಚ್ಚದಲ್ಲಿ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಮತ್ತು 24 ಕಿ.ಮೀ ರಸ್ತೆಯನ್ನು ಡಾಂಬರೀಕರಣ ಮಾಡಲಾಯಿತು. ಆದರೆ ಮಳೆಗಾಲದ ಆರಂಭದಲ್ಲಿ ಮಾಡಿದ್ದರಿಂದ ಕೆಲವೇ ದಿನಗಳಲ್ಲಿ ಗುಂಡಿಗಳ ಪುನರ್ಪ್ರತ್ಯಕ್ಷವಾದವು. ಮತ್ತೆ ಈಗ 94 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಇದರಿಂದ ಏನೇನೂ ಪ್ರಯೋಜನವಾಗದು.
ಏಕೆಂದರೆ ಶಿರಾಡಿಘಾಟ್ನಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ಮಳೆಗೆ ಡಾಂಬರು ನಿಲ್ಲುವುದಿಲ್ಲ.
ಬದಲಿಗೆ 34 ಕಿ.ಮೀ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಿದರೆ ಸಾಕು ಎಂಬುದು ಶಿರಾಡಿಘಾಟ್ನಲ್ಲಿ ಸಂಚರಿಸುವ ರಾಜ್ಯದ ಜನರ ಅನಿಸಿಕೆ. ಇದು ನಿಜಕ್ಕೂ ಉತ್ತಮ ಸಲಹೆ.
ಭೂಸಾರಿಗೆ ಸಚಿವರಾಗಿರುವ ನಮ್ಮ ರಾಜ್ಯದವರೇ ಆದ ಆಸ್ಕರ್ ಫರ್ನಾಡಿಸ್ ಅವರು ಇತ್ತೀಚೆಗೆ ಶಿರಾಡಿ ಘಾಟ್ ಕೊರೆದು ಸುರಂಗ ಮಾರ್ಗ ನಿರ್ಮಾಣ ಮಾಡಲಾಗುವುದು.
ಅಲ್ಲದೆ ಮೇಲ್ಸೇತ್ಸುವೆ ನಿರ್ಮಿಸಲಾಗುವುದು ಎಂದಿದ್ದರು. ಇದೊಂದು ದುಡ್ಡು ಹೊಡೆಯುವ ಕಾಮಗಾರಿಯಾಗುತ್ತದೆ ಹೊರತು ಬೇರೇನೂ ಆಗುವುದಿಲ್ಲ. ಸುರಂಗ ಕೊರೆಯುವುದರಿಂದ ಅಪಾರ ಪ್ರಮಾಣದ ಮರಗಿಡಗಳು, ಬೆಟ್ಟಗುಡ್ಡಗಳು ನಾಶವಾಗುತ್ತವೆ. ಆದ್ದರಿಂದ ಶಿರಾಡಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದರೆ ಸಾಕು.
ಲಾರಿಗಳ ಸಂಚಾರ: ಬೆಂಗಳೂರು- ಹಾಸನ- ಮಂಗಳೂರು ರೈಲು ಸಂಚಾರ ಆರಂಭವಾಗುವುದಕ್ಕೂ ಮುಂಚೆ ಆದಿರು ಸಾಗಿಸುವ ಲಾರಿಗಳಿಂದ ಶಿರಾಡಿ ರಸ್ತೆ ಹಾಳಾಗುತ್ತಿದ್ದರೆ, ಈಗ ಮಂಗಳೂರಿನಿಂದ ಬೆಂಗಳೂರಿಗೆ ಅಪಾರ ಪ್ರಮಾಣದಲ್ಲಿ ಲಾರಿಗಳ ಮೂಲಕ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಡಾಂಬರು ರಸ್ತೆ ಉಳಿಯುವುದಿಲ್ಲ.
ಕೆಲ ಸಂಘಟನೆಗಳು ಶಿರಾಡಿ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ 18 ಲಾರಿಗಳನ್ನು ಸಕಲೇಶಪುರ ತಾಲೂಕು ಆಡಳಿತಕ್ಕೆ ಹಿಡಿದುಕೊಟ್ಟಿದ್ದರು. ಆದರೆ ಪೊಲೀಸ್ ಸ್ಟೇಷನ್ಗೆ 6 ಲಾರಿಗಳು ಮಾತ್ರ ತರಲಾಗಿತ್ತು. ಹೀಗೆ ಜಿಲ್ಲಾಡಳಿತದ ಭ್ರಷ್ಟತೆಯಿಂದಲೂ ರಸ್ತೆಗಳು ಹದಗೆಡುತ್ತಿವೆ.