ಅಪರಾಧ ಮಾಸಾಚರಣೆ: ವಿದ್ಯಾರ್ಥಿಗಳಿಂದ ಜಾಥಾ
ಅರಸೀಕೆರೆ: ಸದಸ್ಯರು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕವಿಟ್ಟುಕೊಂಡರೆ ಸಮಾಜದಲ್ಲಿ ನಡೆಯುವ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಂದನ್ ಕುಮಾರ್ ಹೇಳಿದರು. ಅಪರಾಧ ತಡೆ ಮಾಸಚರಣೆ ಅಂಗವಾಗಿ ನಗರ ಠಾಣೆ ಪೊಲೀಸರು ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸದ ರೀತಿ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಗಲಿರುಳು ಎನ್ನದೇ ಶ್ರಮಿಸುತ್ತಿದೆ ಎಂದರು.
ಸಾರ್ವಜನಿಕರು ಸಹ ಕೆಲವು ಮುಂಜಾಗ್ರತೆ ಕ್ರಮಗಳನ್ನು ವಹಿಸಿದರೆ ಇತರರಿಂದ ತಮ್ಮ ಮೇಲಾಗುವ ತೊಂದರೆ ಹಾಗೂ ದೌರ್ಜನ್ಯದಿಂದ ಪಾರಾಗಬಹುದು ಎಂದು ಕಿವಿಮಾತು ಹೇಳಿದರು. ತಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಯಾರಾದರು ಅನುಮಾನಸ್ಪದ ವ್ಯಕ್ತಿಗಳು ವಾಸಿಸುತ್ತಿದ್ದರೆ ಅಥವಾ ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿದ್ದರೆಂಬ ಅನುಮಾನ ಬಂದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಿದರು.
ಪಟ್ಟಣದ ನಾನಾ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಇದ್ದರು.