ಎನ್ಎಸ್ಎಸ್ ಶಿಬಿರದಿಂದ ಸೇವಾ ಮನೋಭಾವ
ಅರಕಲಗೂಡು: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ ಸಮಾಜ ಸೇವೆಯಲ್ಲಿ ತೊಡಗಲು ರಾಷ್ಟ್ರೀಯ ಸೇವಾ ಯೋಜನೆಗಳ ಶಿಬಿರಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ ತಿಳಿಸಿದ್ದಾರೆ.
ಅವರು ತಾಲೂಕಿನ ಅಂಕನಾಯಕನಹಳ್ಳಿ ಗ್ರಾಮದಲ್ಲಿ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣಗಳತ್ತ ಹೋಗುವಾಗ ಗ್ರಾಮೀಣ ಪರಿಸ್ಥಿತಿಯ ಅರಿವನ್ನೇ ಮರೆಯುವಂತಹ ಪರಿಸ್ಥಿತಿಗಳು ಎದುರಾಗಿವೆ. ಯುವಜನರಲ್ಲಿ ತಮ್ಮ ಸ್ವಗ್ರಾಮದ ಸಮಸ್ಯೆಗಳ ಅರಿವೂ ಇರಬೇಕು. ಇಂದಿನ ಯುವ ಜನರು ದೇಶ ಕಟ್ಟುವ ಕೆಲಸದಲ್ಲಿ ಮುಂದಾಗಲು ಗ್ರಾಮೀಣ ಸಮಸ್ಯೆಗಳ ಅರಿವು ಇದ್ದರೆ ಒಳಿತು ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಅಂಕಯ್ಯ ಮಾತನಾಡಿ, ಯುವಶಕ್ತಿ ನಿರಂತರ ಸೇವೆಯಲ್ಲಿ ತೊಡಗಿಕೊಂಡು ಸಮರ್ಪಣಾ ಮನೋಭಾವದಿಂದ ನಡೆದುಕೊಂಡಲ್ಲಿ ದೇಶದ ಅಭಿವೃದ್ಧಿ ಮತ್ತು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ನರಸೇಗೌಡ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಪಿ. ರೇವಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮೇಗೌಡ,ಶಿಬಿರಾಧಿಕಾರಿ ಸಿ.ವಿ. ಶಾಂತರಾಜು, ಸಹ ಶಿಬಿರಾಧಿಕಾರಿಗಳಾದ ಜವರೇಗೌಡ,ದಶರಥ ಇತರರು ಉಪಸ್ಥಿತರಿದ್ದರು.