ಏಡ್ಸ್ ಜಾಗೃತಿ ಜಾಥಾ: ರೆಡ್ ರಿಬ್ಬನ್ ಕ್ಲಬ್ಗೆ ಚಾಲನೆ
ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ, ಡಿ.29
ತಾಲೂಕಿನ ಹಳ್ಳಿಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಈ ಪ್ರಯುಕ್ತವಾಗಿ ಕಾಲೇಜಿನ ವಿದ್ಯಾರ್ಥಿಗಳು ಎಚ್ಐವಿ-ಏಡ್ಸ್ ಕುರಿತು ಜಾಗೃತಿ ಮೂಡಿಸುವ ಜಾಥಾವನ್ನು ಗ್ರಾಮದಲ್ಲಿ ಹಮ್ಮಿಕೊಂಡಿದ್ದರು.
ಜಾಗೃತಿ ಜಾಥಾವನ್ನು ಕಾಲೇಜಿನ ಪ್ರಾಂಶುಪಾಲ ಎ.ಎಸ್. ರಾಜಶೇಖರ್ ಅವರು ಚಾಲನೆ ನೀಡಿ, ಯುವ ಸಮುದಾಯವು ಮಾರಕ ರೋಗಗಳಾದ ಎಚ್ಐವಿ-ಏಡ್ಸ್ನ ಕುರಿತಂತೆ ಜಾಗೃತರಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಉಪನ್ಯಾಸಕ ಎಚ್.ಎಸ್. ಪ್ರಭುಶಂಕರ್ ಹಾಗೂ ಅರುಣ್ ಕುಮಾರ್ ಮಾತನಾಡಿ, ಯುವ ಸಮುದಾಯವನ್ನಲ್ಲದೇ, ಎಲ್ಲ ವರ್ಗದ ಜನಸಮುದಾಯವನ್ನೂ ಕಾಡುತ್ತಿರುವ ಮಾರಣಾಂತಿಕ ಏಡ್ಸ್ ರೋಗದ ಬಗ್ಗೆ ಚಿಂತನಾಪೂರ್ಣ ವಿಷಯಗಳ ವಿಶೇಷ ಉಪನ್ಯಾಸ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ತೀರ್ಥ ರೈ, ರಕ್ತ ಪರೀಕ್ಷಕರಾದ ಮಂಜೇಶ್, ಆರೋಗ್ಯ ಮಾರ್ಗದರ್ಶಕ ಸೋಮಶೇಖರ್ ಅವರು, ಆಪ್ತಸಮಾಲೋಚನೆ, ರಕ್ತಪರೀಕ್ಷೆಯ ಮಹತ್ವ, ಏಡ್ಸ್ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಹಳ್ಳಿಮೈಸೂರು ಗ್ರಾಮದಲ್ಲಿ ಏಡ್ಸ್ ಜಾಗೃತಿಯ ಭಿತ್ತಿಪತ್ರಗಳೊಂದಿಗೆ ಜಾಗೃತಿ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಜಗದೀಶ್, ಲೋಕೇಶ್, ಆಯಿಷಾಭಾನು ಇತರರು ಇದ್ದರು.