'ಕಲಾವಂತಿಕೆ ನಿತ್ಯವೂ ಜೀವಂತ'
ಶ್ರವಣಬೆಳಗೊಳ: ಕಲಾವಂತಿಕೆ ನಿತ್ಯ ಜೀವಂತ. ಅಭಿರುಚಿಯ ಅಭಿವೃದ್ಧಿ ನಿರಂತರವಿರಬೇಕು. ಸಮರ್ಪಣಾ ಭಾವವಿದ್ದಲ್ಲಿ ಪ್ರಸಿದ್ಧಿ ತಾನಾಗಿ ಒದಗಿ ಬರುತ್ತದೆ. ಆ ಕಾರಣದಿಂದಲೇ ಭಾರತದ ಶಿಲ್ಪ, ಚಿತ್ರಕಲಾ ಪ್ರಕಾರಗಳು ಮಹೋನ್ನತಿಯನ್ನು ಪಡೆದಿರುವುದು ಎಂದು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರವಣಬೆಳಗೊಳದಲ್ಲಿ ಹಾಸನದ ವರ್ಣಕುಂಚ, ವಿಜಯಾ ಆಂಗ್ಲ ಮಾಧ್ಯಮ ಶಾಲೆ, ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಎಸ್.ಡಿ.ಜೆ.ಎಂ.ಐ. ಕಮಿಟಿಯ ಸಂಯುಕ್ತಾಶ್ರಯದಲ್ಲಿ ಆಯೋಜಿತ ವಾಗಿದ್ದ ರಾಜ್ಯಮಟ್ಟದ ಜಲವರ್ಣ ಚಿತ್ರರಚನಾ ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮೂವತ್ತು ಚಿತ್ರಕಲಾವಿದರು, ಎರಡು ದಿನಗಳ ಕಾಲ ಶ್ರವಣಬೆಳಗೊಳದಲ್ಲಿ ವಾಸ್ತವ್ಯ ಹೂಡಿ, ಗೊಮ್ಮಟನ ಪರಿಸರವನ್ನು ಜಲವರ್ಣ ಮತ್ತು ಅಕ್ರಿಲಿಕ್ ಚಿತ್ರಣಗಳನ್ನು ಮಾಡಿದ್ದರು.
ಸಮರ್ಪಣಾ ಭಾವ ಬೇಕು: ಸ್ವಾಮೀಜಿ ಅವರು ವಸ್ತುಪ್ರದರ್ಶನ ಉದ್ಘಾಟಿಸಿ ಆಶೀರ್ವದಿಸಿದರು. ಬಹಳ ಹಿಂದಿನ ಕಾಲದಿಂದಲೂ ಕಲೆಗೆ ಪ್ರೋತ್ಸಾಹವಿದೆ.
ಬೆಳಗೊಳ ಕ್ಷೇತ್ರವು ಬಹಳಷ್ಟು ಜನರಿಗೆ ಉತ್ತೇಜನ ಕೊಟ್ಟಿದೆ. ಗೊಮ್ಮಟನಿಗಿಂತ ಎತ್ತರದ ಶಿಲ್ಪ ಕಲಾ ಮೂರ್ತಿ ನಿರ್ಮಾಣವಾಗುತ್ತಿದೆ.
ಆದರೆ, ಇದಕ್ಕೆ ಪ್ರೇರಣೆ ಗೊಮ್ಮಟನೇ. ಅಂತೆಯೇ ಪುರುಷಾರ್ಥ ನಿಲ್ಲಬಾರದು. ಮುಂದೆ ಮುಂದೆ ಸಾಗಬೇಕು. ಇನ್ನಷ್ಟು ಚಿರಸ್ಥಾಯಿಯಾಗಿ ನಿಲ್ಲುವ ಕೆಲಸಗಳು ಆಗಬೇಕು. ಅಂತಹ ಕೆಲಸಕ್ಕೆ ಸಮರ್ಪಣಾ ಭಾವ ಅತ್ಯವಶ್ಯ ಎಂದರು.
ಕಿವಿಮಾತು: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಮಾತನಾಡಿ, ವೈಯಕ್ತಿಕ ಏಳ್ಗೆಗೆ ಇಂತಹ ಚಿತ್ರಕಲಾ ಶಿಬಿರಗಳು ಸಹಕಾರಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ಧನ್ ಕಲೆಗೆ ಪ್ರೋತ್ಸಾಹ ನೀಡುವ ಮಠ- ಮಾನ್ಯಗಳ ಪರಂಪರೆಯ ವಿಚಾರಧಾರೆಯನ್ನು ಪ್ರಸ್ತುತಪಡಿಸಿ, ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಆಯೋಜಕ ಚಿತ್ರಕಲಾ ಶಿಕ್ಷಕರಾದ ಶಂಕರಪ್ಪ, ಮಂಜುನಾಥ್, ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವಿ. ರಾಮಪ್ಪ, ಸಾಹಿತಿ ರಾಜಶೇಖರ ಮಠಪತಿ ಇದ್ದರು.
ಸುಪ್ರತೀಕ್ ಭಾರದ್ವಾಜ್ ಪ್ರಾರ್ಥಿಸಿ, ನಾಗೇಶ್ ಸ್ವಾಗತಿಸಿ, ಶಂಕರಪ್ಪ ಆಭಾರ ಪ್ರಕಟ ಮಾಡಿದ ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿಸಿದರು.