ಕುಡಿವ ನೀರಿನ ಕಾಮಗಾರಿ; ಸರ್ವೆಗೆ ಚಾಲನೆ
ಪಿ. ಶಾಂತಕುಮಾರ್
ಕ.ಪ್ರ.ವಾರ್ತೆ ಹಾಸನ ಡಿ.29
ತಾಲೂಕಿನ 477 ಹಳ್ಳಿಗಳಿಗೆ ರು. 150 ಕೋಟಿ ವೆಚ್ಚದಲ್ಲಿ ಹೇಮಾವತಿ ನದಿಮೂಲದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಸರ್ವೇ ಕಾರ್ಯಕ್ಕೆ ಚಾಲನೆ ದೊರೆತಿದ್ದು, 2014ರ ಡಿಸೆಂಬರ್ವೇಳೆಗೆ ಈ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ಇದು ಜನರಲ್ಲಿ ಹೊಸ ಆಶಾಕಿರಣವನ್ನು ಉಂಟು ಮಾಡಿದೆ.
ಯೋಜನೆ ಹಿನ್ನೆಲೆ: ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿದಿದ್ದು, 1200 ಅಡಿ ಕೊರೆದರೂ ನೀರು ಬರುತ್ತಿಲ್ಲ. ನೀರು ಸಿಕ್ಕರೂ ಕೆಲವೇ ದಿನಗಳಲ್ಲಿ ಬರಿದಾಗುತ್ತಿದ್ದು, ಈಗ ಲಭ್ಯವಿರುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಆದ್ದರಿಂದ ಇಲ್ಲಿನ ಜನರು ಮೂಳೆ ಸವೆತ, ವಸಡು ನೋವು ಇನ್ನಿತರ ರೋಗಗಳಿಂದ ನರಳುತ್ತಿದ್ದಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೋರಾಟದ ಫಲವಾಗಿ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿಗೆ ಅನುಮತಿ ದೊರತಿತ್ತು. ಅಂದಿನ ಉಪಮುಖ್ಯಮಂತ್ರಿ ಈಶ್ವರಪ್ಪ ಈ ಕಾಮಗಾರಿಯನ್ನು ಉದ್ಘಾಟಿಸಿದ್ದರು.
ನೀರಿನ ಮಾರ್ಗ: ಜಿಂದಾಲ್ ಕಂಪನಿಯ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ನಿರ್ಮಿಸುವ ಎರಡು ಪ್ರಮುಖ ಕೇಂದ್ರಗಳ ಮೂಲಕ 42 ಗ್ರಾ.ಪಂ. ವ್ಯಾಪ್ತಿಯಲ್ಲಿನ 477 ಗ್ರಾಮಗಳ ಜನತೆಗೆ ಅಗತ್ಯವಾದ ಶುದ್ಧ ಕುಡಿಯುವ ನೀರನ್ನು ಪ್ರತಿನಿತ್ಯ ಪೂರೈಸಲು ವ್ಯವಸ್ಥಿತವಾದ ಯೋಜನೆ ಇದಾಗಿದೆ. ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಹತ್ತಿರದ ಹಳೇ ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗುವ ಪ್ರಮುಖವಾದ ನೀರಿನ ಟ್ಯಾಂಕ್ಗೆ ಚನ್ನರಾಯಪಟ್ಟಣದ ಘನ್ನಿಗಡ ಬಳಿಯಲ್ಲಿ ನಿರ್ಮಿಸಲಾಗುವ ಜಾಕ್ವೆಲ್ಗಳ ಮೂಲಕ ದೊಡ್ಡ ಪ್ರಮಾಣದ ಕೊಳವೆಗಳ ಮಾರ್ಗದಲ್ಲಿ ನದಿಯ ನೀರು ಹರಿದು ಬರಲಿದೆ. ಇಲ್ಲಿನ ಜಲ ಶುದ್ದಿಕರಣ ಘಟಕದಲ್ಲಿ ಹೇಮಾವತಿ ನದಿಯ ನೀರನ್ನು ಶುದ್ಧೀಕರಿಸಿದ ಮೇಲೆ ಗಂಡಸಿ ಕೇಂದ್ರದ ಮಾರ್ಗವಾದ ಗಂಡಸಿ, ಬೆಳಗುಂಬ, ಮಾಲೇಕಲ್ ತಿರುಪತಿ, ಶಂಕರನಹಳ್ಳಿ, ಡಿ.ಎಂ. ಕುರ್ಕೆ, ನರಸೀಪುರ ಮತ್ತು ಶಾನೇಗೆರೆ ಗ್ರಾಮದಲ್ಲಿನ 7 ಉಪಕೇಂದ್ರಗಳಿಗೆ ಗುರುತ್ವಾಕರ್ಷಣೆ ಮೂಲಕವೇ ಕೊಳವೆ ಮಾರ್ಗದಲ್ಲಿ ಸರಬರಾಜಾಗಲಿದೆ. ಅಲ್ಲದೇ, 2ನೇ ಪ್ರಮುಖ ಕೇಂದ್ರವಾಗಿರುವ ಬಾಗೇಶಪುರ ಗ್ರಾಮದ ದೊಡ್ಡಗುಡ್ಡದ ಬಳಿಯಿಂದ ಬಾಗೇಶಪುರ, ರಂಗಾಪುರ, ಹಬ್ಬನಘಟ್ಟ, ಕೊಳಗುಂದ, ನೇರ್ಲಿಗೆ ಗ್ರಾಮಗಳಲ್ಲಿ 5 ಉಪ ಕೇಂದ್ರಗಳು ಸೇರಿದಂತೆ ಒಟ್ಟು 12 ಉಪಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಕುಡಿಯುವ ನೀರಿನ ಸರಬರಾಜಿಗೆ ಈ ಯೋಜನೆ ರೂಪಿಸಲಾಗುವುದು.
ಜಿಂದಾಲ್ಗೆ ಜವಾಬ್ದಾರಿ: ಈ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಗುತ್ತಿಗೆ ನೀಡಿದ್ದು, ಸುಮಾರು 1 ವರ್ಷದ ಅವಧಿಯಲ್ಲಿ ಕಾಮಾಗಾರಿಗಳನ್ನು ಸಂಪೂರ್ಣ ಮಾಡಬೇಕಾಗಿದ್ದು, 5 ವರ್ಷಗಳ ಕಾಲ ಈ ಕಂಪನಿಯೇ ಗ್ರಾಮಗಳಿಗೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಆಳವಡಿಸುವ ಮೂಲಕ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರತಿನಿತ್ಯ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಲಿದೆ.
ಯಾರಿಗೆ ಉಪಯೋಗ?
ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ತಾಲೂಕಿನ ಜಾವಗಲ್ ಹೋಬಳಿಯ ಬಂದೂರು ಗ್ರಾಪಂನ 18 ಗ್ರಾಮಗಳು, ಅರಕೆರೆ ಗ್ರಾ.ಪಂ. 15 ಗ್ರಾಮಗಳು ಕೊಳಗುಂದ ಗ್ರಾ.ಪಂ. 9 ಗ್ರಾಮಗಳು, ಜಾವಗಲ್ ಗ್ರಾ.ಪಂ.ನ 2 ಗ್ರಾಮಗಳು ಹಾಗೂ ನೇರ್ಲಿಗೆ ಗ್ರಾ.ಪಂ.ನ 9 ಗ್ರಾಮಗಳು ಸೇರಿದಂತೆ ಒಟ್ಟು 5 ಗ್ರಾ.ಪಂ. ವ್ಯಾಪ್ತಿಯಲ್ಲಿನ ಒಟ್ಟು 51 ಗ್ರಾಮಗಳನ್ನು ಈ ಯೋಜನೆ ಒಳಗೊಂಡಿದ್ದು, ಇನ್ನಿತರೆ ಗ್ರಾಮಗಳಿಗೆ ಬೇಲೂರಿನ ಯಗಚಿ ನದಿಯ ಮೊದಲೇ ಹಂತದ ಯೋಜನೆಯಲ್ಲಿ ಈಗಾಗಲೇ ಕುಡಿಯುವ ನೀರು ಪೂರೈಕೆಯಾಗಲಿದೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ 37 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ 426 ಗ್ರಾಮಗಳಿಗೆ ನೀರು ಸರಬರಾಜಾಗಲಿದ್ದು ಅದರ ವಿವರ...
ಅಗ್ಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 9 ಗ್ರಾಮಗಳು, ಬಾಗೇಶಪುರ ಗ್ರಾ.ಪಂನ. 7 ಗ್ರಾಮಗಳು ಬಾಗೇಬಾಳು ಗ್ರಾ.ಪಂ.ನ 11 ಗ್ರಾಮಗಳು, ಬಂದೂರು ಗ್ರಾ.ಪಂ.ನ 18 ಗ್ರಾಮಗಳು, ಬೆಳಗುಂಬ ಗ್ರಾ.ಪಂ.ನ 28 ಗ್ರಾಮಗಳು, ಬೆಂಡೇಕೆರೆ ಗ್ರಾ.ಪಂ.ನ 6 ಗ್ರಾಮಗಳು, ಚಗಚಗೆರೆ ಗ್ರಾ.ಪಂ.ನ 12 ಗ್ರಾಮಗಳು, ಡಿ.ಎಂ.ಕುರ್ಕೆ ಗ್ರಾ.ಪಂ.ನ 8 ಗ್ರಾಮಗಳು, ದುಮ್ಮೇನಹಳ್ಳಿ ಗ್ರಾ.ಪಂ.ನ 19 ಗ್ರಾಮಗಳು, ಗಂಡಸಿ ಗ್ರಾ.ಪಂ.ನ 6 ಗ್ರಾಮಗಳು, ಗೀಜೀಹಳ್ಳಿ ಗ್ರಾ.ಪಂ.ನ 5 ಗ್ರಾಮಗಳು, ಹಬ್ಬನಘಟ್ಟ ಗ್ರಾ.ಪಂ.ನ 15 ಗ್ರಾಮಗಳು, ಹಾರನಹಳ್ಳಿ ಗ್ರಾ.ಪಂ.ನ 5 ಗ್ರಾಮಗಳು, ಹೆಗ್ಗಟ್ಟ ಗ್ರಾ.ಪಂ.ನ 11 ಗ್ರಾಮಗಳು, ಹಿರಿಯೂರು ಗ್ರಾ.ಪಂ.ನ 5 ಗ್ರಾಮಗಳು, ಜೆ.ಸಿ.ಪುರ ಗ್ರಾ.ಪಂ.ನ 7 ಗ್ರಾಮಗಳು, ಜಾಜೂರು ಗ್ರಾ.ಪಂ.ನ 6 ಗ್ರಾಮಗಳು, ಕೆ.ಶಂಕರನಹಳ್ಳಿ ಗ್ರಾ.ಪಂ.ನ 13 ಗ್ರಾಮಗಳು, ಕಾಚೀಘಟ್ಟ ಗ್ರಾ.ಪಂ.ನ 18 ಗ್ರಾಮಗಳು, ಕಲ್ಗುಂಡಿ ಗ್ರಾ.ಪಂ.ನ 11 ಗ್ರಾಮಗಳು, ಕಾಮಸಮುದ್ರ ಗ್ರಾ.ಪಂ.ನ 12 ಗ್ರಾಮಗಳು, ಕಣಕಟ್ಟೆ ಗ್ರಾ.ಪಂ.ನ 9 ಗ್ರಾಮಗಳು, ಕೆಂಕೆರೆ ಗ್ರಾ.ಪಂ.ನ 12 ಗ್ರಾಮಗಳು, ಕೊಂಡೆನಾಳು ಗ್ರಾ.ಪಂ.ನ 14 ಗ್ರಾಮಗಳು, ಕರುಗುಂದ ಗ್ರಾ.ಪಂ.ನ 6 ಗ್ರಾಮಗಳು, ಕುರುವಂಕ ಗ್ರಾ.ಪಂ.ನ 21 ಗ್ರಾಮಗಳು, ಲಾಳನಕೆರೆ ಗ್ರಾ.ಪಂ.ನ 11 ಗ್ರಾಮಗಳು, ಮಾಡಾಳು ಗ್ರಾ.ಪಂ.ನ 7 ಗ್ರಾಮಗಳು, ಮುದುಡಿ ಗ್ರಾ.ಪಂ.ನ 13 ಗ್ರಾಮಗಳು, ನರಸೀಪುರ ಗ್ರಾ.ಪಂ.ನ 9 ಗ್ರಾಮಗಳು, ಪುರ್ಲೇಹಳ್ಳಿ ಗ್ರಾ.ಪಂ.ನ 16 ಗ್ರಾಮಗಳು, ರಾಂಪುರ ಗ್ರಾ.ಪಂ.ನ 13 ಗ್ರಾಮಗಳು, ರಂಗಾಪುರ ಗ್ರಾ.ಪಂ.ನ 22 ಗ್ರಾಮಗಳು, ಶಾನೆಗೆರೆ ಗ್ರಾ.ಪಂ.ನ 22 ಗ್ರಾಮಗಳು, ತಳಲೂರು ಗ್ರಾ.ಪಂ.ನ 24 ಗ್ರಾಮಗಳು, ಯಡವನಹಳ್ಳಿ ಗ್ರಾ.ಪಂ.ನ 14 ಗ್ರಾಮಗಳು, ಬಾಣಾವರ ಗ್ರಾ.ಪಂ.ನ 1 ಬಾಣಾವರ ಗ್ರಾಮ ಸೇರಿದಂತೆ ಒಟ್ಟು 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗಲಿದೆ.