ನಾನಾ ಸಂಘಟನೆಗಳಿಂದ ಕುವೆಂಪು ಜನ್ಮ ದಿನಾಚರಣೆ
ಕ.ಪ್ರ.ವಾರ್ತೆ, ಹಾಸನ, ಡಿ. 29
ನಗರದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಜನ್ಮ ದಿನಾಚರಣೆಯನ್ನು ಭಾನುವಾರ ನಾನಾ ಸಂಘಟನೆಗಳು ಆಚರಣೆ ಮಾಡಿದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಾಗೂ ಕುವೆಂಪು ರಚಿತ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಯೋಗಗುರು ಎಚ್.ಬಿ. ರಮೇಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕುವೆಂಪು ಅವರು ವಿವೇಕಾನಂದರ ಸ್ಫೂರ್ತಿ ಹಾಗೂ ಇತರರ ಆದರ್ಶಗುಣಗಳಿಂದ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ಕುವೆಂಪು ಅವರ ಆದರ್ಶಗಳು ನಮ್ಮ ಆದರ್ಶಗಳಾಗಬೇಕು. ಅವರ ಸಿದ್ಧಾಂತಗಳನ್ನು ಪಾಲಿಸಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಆದರ್ಶ: ಕುವೆಂಪು ಅವರು ಮಹಾನ್ ಕೊಡುಗೆ ಅಂದರೆ ತೇಜಸ್ವಿ. ಜೊತೆಗೆ, ಅವರು ಸಾಹಿತ್ಯ ಲೋಕಕ್ಕೆ ನೀಡಿರುವಂತಹ ಕೊಡುಗೆ ಅಪಾರವಾಗಿದೆ. ಕುವೆಂಪು ಅವರ ಆದರ್ಶಗುಣಗಳು ಹಾಗೂ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಸರ್ವಕಾಲಿಕ. ಕುವೆಂಪು ಅವರ ಸಾಮಾಜಿಕ ಕಳಕಳಿ ಹಾಗೂ ಅವರ ವೈಯಕ್ತಿಕ ಜೀವನ ಸಹ ಪ್ರಸ್ತುತ ಪೀಳಿಗೆಗೆ ಆದರ್ಶವಾಗಲಿದೆ ಎಂದರು.
ಪರಂಪರೆ ಮರೆಯುತ್ತಿದ್ದೇವೆ: ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಕುವೆಂಪು, ಕೇವಲ ಒಂದು ಸಮುದಾಯಕ್ಕೆ ಹಾಗೂ ದೇಶಕ್ಕೆ ಸೀಮಿತವಾಗಿರದೇ ವಿಶ್ವ ಮಾನವರಾಗಿ ಬೆಳೆದ ಮಹಾನ್ ವ್ಯಕ್ತಿ. ಈ ನಾಡಿನ ಸಂಸ್ಕೃತಿಯನ್ನು ವಿಶ್ವದಾದ್ಯಂತ ಮುಟ್ಟಿಸಿದಂತಹ ಮಹಾನ್ ಚೇತನ ಹಾಗೂ ಸರ್ವಶ್ರೇಷ್ಠರಾಗಿದ್ದರು. ವಿಪರ್ಯಾಸ ಅಂದ್ರೆ ಪ್ರಸ್ತುತ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುವ ಮೂಲಕ ನಮ್ಮ ಪರಂಪರೆಯನ್ನು ಮರೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಮಹಿಳೆಯರು ನಮ್ಮ ಸಂಸ್ಕೃತಿ ನೆಲೆಗಟ್ಟನ್ನು ಮರೆಮಾಚುತ್ತಿದ್ದಾರೆ. ಮಕ್ಕಳು ಕೂಡ ನಮ್ಮ ಪರಂಪರೆಯನ್ನು ತಿಳಿದುಕೊಳ್ಳುವಂತಹ ಪರಿಗೆ ಮುಂದಾಗುತ್ತಿಲ್ಲ. ಕುವೆಂಪು ಅವರ ಆದರ್ಶ ಗುಣಗಳನ್ನು ನಾವುಗಳು ಪಾಲಿಸಲು ಸಾಧ್ಯವಾಗದಿದ್ದರೂ ಕೂಡ ಅವುಗಳನ್ನು ಅನುಸರಿಸಲು ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಕುವೆಂಪು ರಚಿತ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ಧನ್, ಮಾಜಿ ಅಧ್ಯಕ್ಷ ಹನುಮಂತೇಗೌಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಇದ್ದರು.
'ಭಾಷಾ ಸೌಹಾರ್ದತೆಯಿಂದ ಕೋಮು ಸೌಹಾರ್ದತೆ'
ಭಾಷಾ ಸೌಹಾರ್ದತೆಯಿಂದ ಕೋಮು ಸೌಹಾರ್ದತೆ ಉಂಟಾಗುತ್ತದೆ ಎಂದು ಹಿರಿಯ ವಿದ್ವಾಂಸ ಸೈಯದ್ ಶಹಾಬುದ್ದೀನ್ ತಿಳಿಸಿದರು.
ಅವರು ನಗರದ ವಿವೇಕಾನಂದ ಯೋಗ ಶಿಕ್ಷಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕುವೆಂಪುರವರ ಕೃತಿಗಳನ್ನು ಉರ್ದು ಭಾಷೆಗೆ ಅನುವಾದ ಮಾಡುವಾಗ ಕುವೆಂಪು ಅವರೊಂದಿಗಿದ್ದ ಸಹಚರ್ಯವನ್ನು ಹಂಚಿಕೊಂಡ ಅವರು, ಕುವೆಂಪುರವರ ಸರಳತೆಯು ಮತ್ತು ಅವರ ಕೃತಿಗಳಲ್ಲಿ ಬಿಂಬಿತವಾಗಿದ್ದು, ಈ ಕಾರಣಕ್ಕಾಗಿಯೆ ಭಾಷಾಂತರಗೊಡ ಎಲ್ಲಾ ಭಾಷೆಗಳಲ್ಲೂ ಅವರ ಕೃತಿಗಳು ಜನಪ್ರಿಯವಾಗಿವೆ ಎಂದರು.
ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ಪ್ರತಿಧರ್ಮದ ಮೂಲತತ್ವಗಳನ್ನು ಅರಿತು ಬಾಳಿದರೆ ಎಲ್ಲೆಡೆ ಸಾಮರಸ್ಯ ಸಾಧ್ಯ ಎಂದರು.
ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ್ ಉಡುಪ ಅವರು ಕುವೆಂಪುರವರ ಶ್ರೀ ರಾಮಾಯಣ ದರ್ಶನಂನ ಕೆಲವು ಭಾಗಗಳನ್ನು ವಾಚಿಸಿದರು. ಗೊರೂರು ಶಿವೇಶ್ ನಿರೂಪಿಸಿದರು. ಹರೀಶ್ ಸ್ವಾಗತಿಸಿದರು. ರವೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣಾರ್ಥಿಗಳಾದ ಚಂಗಪ್ಪ, ಪುಟ್ಟಪ್ಪ, ಧರ್ಮಪ್ಪ, ರಾಮಚಂದ್ರ, ಚಂದ್ರೇಗೌಡ, ಮಂಜುನಾಥ್, ನಿರ್ಮಲ, ನಂದ, ಶೈಲಜ, ಶಮಂತಕಮಣಿ, ಸುಮ, ವಿಜಯಲಕ್ಷ್ಮಿ, ಎಚ್.ಎನ್. ಜನಾರ್ಧನ್, ಚಂದ್ರು ಹಾಗೂ ಇತರರು ಇದ್ದರು.