ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭೀತಿಯಲ್ಲಿ ಗ್ರಾಮಸ್ಥರು

Rashmi Kasaragodu
Updated On : 30 Dec 2013, 1:44 am

ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಸಮೀಪದ ಕಾಮನಾಯಕನಹಳ್ಳಿ 20 ರೈತರ ಮನೆಗಳಿಗೆ ನವಿಲೆ ಏತನೀರಾವರಿಯ ಎಡದಂಡೆ ಕಾಲುವೆ ಊರ ನಡುವೆಯ ಸಂತೆಶಿವರ ಕೆರೆಗೆ ನೀರು ಹರಿಸಿರುವುದರಿಂದ ಮನೆಗಳಿಗೆ ಶೀತ ಬಂದು ಮನೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮನೆಗಳನ್ನು ತೊರೆಯಬೇಕಾಗಿದೆ. ಕಾಲುವೆ ನಿರ್ಮಾಣ ಮಾಡಿದ ಎಂಜಿನಿಯರ್ಗಳ ನಿರ್ಲಕ್ಷ್ಯದಿಂದ ಸಂತೆಶಿವರ ಕೆರೆಗೆ ನೀರು ಹರಿಸುವ ಕಾಲುವೆ ಹೋಗಿದೆ. ಇದರಿಂದ ಎಡಭಾಗದ ತಗ್ಗಿನ ಮನೆಗಳಲ್ಲಿ ನೀರು ನಿತ್ಯ ಹರಿಯುತ್ತದೆ. ಇದರಿಂದ, ತಮ್ಮ ವಾಸದ ಮನೆಗಳನ್ನು ಬಿಟ್ಟು ಬೇರೆಯವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ಗಳಿಗೆ 8 ವರ್ಷದಿಂದ ದೂರು ಸಲ್ಲಿಸಿದರೂ ಇತ್ತ ಗಮನ ಹರಿಸಿಲ್ಲ.
ಟಿ ಸಣ್ಣೇಗೌಡ, ಪುಟ್ಟೇಗೌಡ, ಮಧುಸೂದನ, ಗಾಡಿ ಬಸವೇಗೌಡ, ಶಂಕರೇಗೌಡ, ಕುಪ್ಪುರೇಗೌಡ, ತಮ್ಮೇಗೌಡ.


ಪೈಪ್ ಒಡೆದು ನೀರು ಪೋಲು
ಹಾಸನ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಉತ್ತರ ಭಾಗದ ನಿವೇಶನದಲ್ಲಿ ಅಳವಡಿಸಿರುವ ಯಗಚಿ ನೀರು ಸರಬ ರಾಜು ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿದೆ. ಸುಮಾರು ವರ್ಷಗಳಿಂದಲೂ ಈ ಪೈಪ್ ಲೈನ್ ಅನೇಕ ಕಡೆ ಒಡೆದು ಹೋಗಿ, ನೀರು ನಿವೇಶಗಳನ್ನು ಆವರಿಸಿ ಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯ ತಾಳಿದ್ದಾರೆ.  
ನೀರು ನಿಲುಗಡೆ ಯಿಂದ ಸೊಳ್ಳೆ ಗಳ ಸಂತತಿ ವೃದ್ಧಿಯಾಗಿರುವುದಲ್ಲದೆ ಕೊಳೆತ ನೀರಿನ ವಾಸನೆ ಅಲ್ಲಿನ ನಿವಾಸಿಗಳಿಗೆ ಅಸಹನೀಯವಾಗಿದ್ದು, ರೋಗರುಜಿನ ಹರಡುವ ಸಂಭವ ವಿದೆ.  ನಗರದ ನಾಗರೀಕರಿಗೆ ಒಡೆದು ಹೋಗಿರುವ ಪೈಪ್ ಮೂಲಕ ಕೊಳಚೆ ನೀರೂ ಸಹ ಸರಬರಾಜಾಗುತ್ತಿದೆ. ಈ ಪೈಪ್ಲೈನ್ ದುರಸ್ತಿಗೆ ಮತ್ತು ಬದಲಾವಣೆಗೆ ಮನವಿ ಮಾಡಿದ್ದರೂ  ಪ್ರಯೋಜನವಾಗಿಲ್ಲ .
ಟಿ ರಾಮೇಗೌಡ, ವಿಶಾಲಾಕ್ಷಿ, ಪುಟ್ಟಸ್ವಾಮಿ, ರತ್ನಮ್ಮ.


ವಿದ್ಯುತ್ ಕಂಬ ಬದಲಿಸಿ...
ಜಾವಗಲ್ ಹೋಬಳಿ ಉಂಡಿಗನಾಳು ಗ್ರಾಮದ ಗ್ರಾ.ಪಂ. ಕಚೇರಿ ಮುಂಭಾಗದ ಟಿ.ಸಿ ಅಳವಡಿಸಿರುವ ವಿದ್ಯುತ್ ಕಂಬ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಮುರಿದು ಬೀಳುವ ಸಂಭವವಿದೆ.
ಟಿ.ಸಿ ಅಳವಡಿಸಿರುವ ವಿದ್ಯುತ್ ಕಂಬವು ಗ್ರಾಮದ ಮುಖ್ಯರಸ್ತೆಯಲ್ಲಿ ಇದ್ದು ಇದರ ಸುತ್ತ ಗ್ರಾ.ಪಂ. ಕಚೇರಿ, ಬ್ಯಾಂಕ್ ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಿ.ಎಸ್.ಎನ್.ಎಲ್. ಕಲ್ಕೇರಿ, ಅಂಗಡಿ ಮುಂಗಟ್ಟುಗಳಿಂದ ಕೂಡಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು ಈ ಮಾರ್ಗದಲ್ಲಿಯೇ ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ.
ವಿದ್ಯುತ್ ಕಂಬವು ಶಿಥಿಲಗೊಂಡು 4-5 ತಿಂಗಳಾಗಿದ್ದರೂ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಈ ಬಗ್ಗೆ ಗಮನ ನೀಡಿಲ್ಲ. ಸಾರ್ವಜನಿಕರು ಹಲವಾರು ಬರೀ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಗೊಂಡಿರುವ ಕಂಬಕ್ಕೆ ತಂತಿಕಂಬವನ್ನು ಒತ್ತುಕೊಟ್ಟು ನಿಲ್ಲಿಸಲಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಕಂಬವನ್ನು ಬದಲಿಸಿ ಅನುಕೂಲ ಮಾಡಿಕೊಡಬೇಕು. .
ಟಿ ಗ್ರಾಮಸ್ಥರಾದ ಜಗದೀಶ್, ಪರಮೇಶ್ವರ


ವೇದಿಕೆಯಾಗಿ ಬಳಸಿ
ಹಾಸನ ನಗರದ ಹಳೇ ಬಸ್ನಿಲ್ದಾಣ ರಸ್ತೆಯ ಶ್ರೀ ಗಣಪತಿ ಸೇವಾ ಸಂಸ್ಥೆಯ ಪೆಂಡಾಲನ್ನು  ಸಾಂಸ್ಕೃತಿಕ ವೇದಿಕೆಯನ್ನಾಗಿ ಮಾಡಬೇಕು. ಗಣಪತಿ ಪೆಂಡಾಲಿನಲ್ಲಿ ಪ್ರತೀ ವರ್ಷ ಉತ್ಸವಾದ  ನಂತರ ವ್ಯಾಪಾರಕ್ಕೆ ಕೊಡದೇ ಜಿಲ್ಲೆ ಹಾಗೂ  ನಗರದಲ್ಲಿ ಇರುವ ಉದಯೋನ್ಮುಖ ಕಲಾವಿದರಿಗೆ, ಸಾಹಿತಿಗಳಿಗೆ, ವರ್ಷದ 365 ದಿನಗಳು ನಿರಂತರವಾಗಿ ಸಂಗೀತ, ಸಾಹಿತ್ಯ, ಭರತನಾಟ್ಯ, ನಾಟಕ, ಹಾಸ್ಯ-ಲಾಸ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು  ಸಮಿತಿ  ಸಹಕರಿಸಿದರೆ  ನಗರದಲ್ಲೊಂದು ಬೃಹತ್ ಸಾಂಸ್ಕೃತಿಕ ವೇದಿಕೆ ಆಗುವುದರಲ್ಲಿ ಯಾವ ಸಂದೇಹವಿಲ್ಲ.ಅತ್ಯುತ್ತಮವಾದ ಧ್ವನಿ, ಬೆಳಕು, ಫ್ಯಾನ್, ಆಸನದ ವ್ಯವಸ್ಥೆ, ಕುಡಿಯಲು ನೀರು, ಶೌಚಾಲಯಗಳನ್ನು ಕಲ್ಪಿಸಬೇಕು. ಜಿಲ್ಲೆ ಹಾಗೂ ನಗರದ ಕೊಡುಗೈ ದಾನಿಗಳು ಮುಂದೆ ಬಂದು ಆರ್ಥಿಕ ನೆರವು ನೀಡಿದ್ದಲ್ಲಿ ಅವರ ಭಾವಚಿತ್ರಗಳೊಂದಿಗೆ ಹೆಸರನ್ನು  ಸಾಂಸ್ಕೃತಿಕ ವೇದಿಕೆಯ ಮುಂದೆ ಹಾಕಬೇಕು. ಒಂದು ಸಾವಿರ ಕುರ್ಚಿಗಳನ್ನು  ಹಾಕಲು ಸ್ಥಳಾವಕಾಶವಿದ್ದು, ನಗರದ ಪ್ರತಿ ಮನೆಯಿಂದ ಎರಡು ಕುರ್ಚಿಗಳನ್ನು ದೇಣಿಗೆಯಾಗಿ  ಪಡೆಯಬಹುದು. ಪೆಂಡಾಲನ್ನು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ವೇದಿಕೆಯಾಗಿ ಮಾರ್ಪಾಡು ಮಾಡಲು ಶ್ರೀ ಗಣಪತಿ ಸೇವಾ ಸಂಸ್ಥೆಯ. ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಗಮನಹರಿಸಲಿ..
ಟಿ ಚನ್ನವೀರಪ್ಪ,  ಮಾಜಿ ಅಧ್ಯಕ್ಷರು, ನಗರಸಭೆ, ಹಾಸನ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement