'ವಿಶ್ವ ಮಾನವರಾಗಲು ಪ್ರಯತ್ನಿಸಬೇಕು'
ಸಕಲೇಶಪುರ: ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಶ್ವಮಾನವರಾಗಲು ಪ್ರಯತ್ನ ನಡೆಸಬೇಕಾಗಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅನಂತನಾಯಕ್ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾದ ಪ್ರಥಮ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಒಂದಾಗಬೇಕು: ಜಾತಿ, ಮತ, ಪಂಥ, ಪ್ರದೇಶಗಳನ್ನು ವಿದ್ಯಾರ್ಥಿಗಳು ಮೀರಿ ಬೆಳೆಯವ ಪ್ರಯತ್ನ ಮಾಡವ ಮೂಲಕ ವಿಶ್ವಮಾನವರಾಗುವ ಹಾಗೂ ದೇಶದಲ್ಲಿ ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ನಡೆಸಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಜಾತಿ- ಮತದ ಅರಿವಿರುವುದಿಲ್ಲ. ಆದರೆ, ಶಾಲಾ ಕಾಲೇಜು ಮಟ್ಟದಲ್ಲೂ ಜಾತಿ, ಮತ ಬಿತ್ತುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇವುಗಳನ್ನು ವಿದ್ಯಾರ್ಥಿಗಳು ತಡೆಯುವ ನಿಟ್ಟಿನಲ್ಲಿ ಹೋರಾಟ ಮಾಡಲು ಒಂದಾಗಬೇಕಿದೆ. ವಿದ್ಯಾರ್ಥಿಗಳು ಒಂದಾಗದಿದ್ದರೆ ಉನ್ನತ ಶಿಕ್ಷಣ, ಉದ್ಯೋಗ ದೂರವಾಗಲಿದೆ ಎಂದರು.
ಹೋರಾಟ: ಎಸ್ಎಫ್ಐ ಜಿಲ್ಲಾ ಮುಖಂಡ ಅನುಷಾದ್ ಮಾತನಾಡಿ, ಮಾಧ್ಯಮಗಳು ಹೆಣ್ಣನ್ನು ವೈಭವೀಕರಣ ಮಾಡುತ್ತಿರುವುದರಿಂದಾಗಿ ಇಂದು ಅತ್ಯಾಚಾರದಂತಹ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಲು ಕಾರಣವಾಗಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಟ್ಟಾಗಿ ಪ್ರತಿಭಟನೆ ನಡೆಸದಿದ್ದರೆ ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಿನ ಆತಂಕ ಎದುರಿಸಬೇಕಾಗುತ್ತದೆ. ಆದ್ದರಿಂದ ಎಸ್ಎಫ್ಐ ಸಂಘಟನೆ ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಎಂಬ ಗುರಿಯನ್ನಿಟ್ಟು ಹೋರಾಟ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಮುಖಂಡ ಮಹೇಶ್ ಇದ್ದರು.