ಶಾಸಕರ ಭೇಟಿಗೆ ದಸಂಸ ನಿಯೋಗ: ನಿರ್ಧಾರ
ಅರಕಲಗೂಡು: ತಾಲೂಕಿನಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಶಾಸಕ ಎ. ಮಂಜು ಅವರನ್ನು ಶೀಘ್ರವೇ ಬೇಟಿ ಮಾಡಿ ಮನವರಿಕೆ ಮಾಡಿಕೊಡುವ ಸಲುವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗಿಂದಾಗ್ಗೆ ಸಂಭವಿಸುತ್ತಿರುವ ದಲಿತರ ಮೇಲಿನ ಹಲ್ಲೆಗಳಿಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚಿಸುವ ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುವ ಬಗೆಗೆ ಚರ್ಚಿಸಲಾಯಿತು.
ಇತರೆ ಸಮುದಾಯಗಳೊಂದಿಗೆ ಅನ್ಯೋನ್ಯತೆ ಸಾಧಿಸುವ ಅಗತ್ಯವಿದೆ. ಇದರ ಬಗೆಗೂ ದಸಂಸ ಸಭೆಯಲ್ಲಿ ಚರ್ಚಿಸಿತಲ್ಲದೇ,ಅನಗತ್ಯವಾಗಿ ಸಂಘರ್ಷ ಏರ್ಪಡುವುದನ್ನ ಸಹಿಸಲೂ ಸಾಧ್ಯವಿಲ್ಲ ಎಂಬುದೂ ಚರ್ಚೆಯಲ್ಲಿ ಕೇಳಿಬಂತು.
ದೂರ ಉಳಿಯಲು ನಿರ್ಧಾರ: ತಾಲೂಕಿನಲ್ಲಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಬಲಿಷ್ಠವಾಗಿದ್ದು, ಇತರೆ ದಲಿತ ಒಕ್ಕೂಟಗಳು ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರಲು ಸಭೆಯಲ್ಲಿ ನಿರ್ಧರಿಸಿದೆ.
ಸಭೆಯ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕ ಮುತ್ತಿಗೆ ಬೊಮ್ಮಯ್ಯ ವಹಿಸಿದ್ದರು. ಸಭೆಯಲ್ಲಿ ದಸಂಸ ಮುಖಂಡರುಗಳಾದ ಅಜ್ಜೂರು ರಾಮು,ವೆಂಕಟಾಚಲ,ರಮೇಶ್ ಮರಲಕ್ಕಿಕೊಪ್ಪಲು, ಚಿನ್ನಸ್ವಾಮಿ, ನಾಗರಾಜು, ಶಂಕರ್ ಇತರರು ಉಪಸ್ಥಿತರಿದ್ದರು.