ಆಧ್ಯಾತ್ಮಿಕ ಚಿಂತನೆ ಅಂತರಂಗ ಶುದ್ಧಿಗೆ ಪ್ರೇರಕ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 30
ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಮಾತ್ರ ಮನುಷ್ಯ ಸಮಾಜದ ನಡುವೆ ಸಜ್ಜನ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ಪುರಾಣ ಪ್ರವಚನದಂತಹ ಆಧ್ಯಾತ್ಮಿಕ ಚಿಂತನಾ ಕಾರ್ಯಗಳು ಅಂತರಂಗ ಶುದ್ದಿಗೆ ಪ್ರೇರಕ ಶಕ್ತಿಯನ್ನು ನೀಡುತ್ತವೆ ಎಂದು ತಿಪಟೂರಿನ ಷಡಕ್ಷರಿ ಮಠದ ಶ್ರೀರುದ್ದಮುನಿಸ್ವಾಮೀಜಿಗಳು ತಿಳಿಸಿದರು.
ಆಶೀರ್ವಚನ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀಗುರುಶಿವಬಸವ ಕುಮಾರಾಶ್ರಮದಲ್ಲಿ ಶನಿವಾರ ಸಂಜೆ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀನೀಲಲೋಚನ ಸ್ವಾಮೀಜಿಗಳ 21ನೇ ವರ್ಷದ ಪುಣ್ಯ ಸ್ಮರಣಾರಾಧನೆ ಮತ್ತು ಹಿರಿಯ ಮಹಾ ತಪಸ್ವಿಗಳಾದ ಶ್ರೀಶಿವಲಿಂಗಜ್ಜಯ್ಯ ಸ್ವಾಮಿಗಳ ಪುರಾಣ ಪ್ರವಚನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ಪರಿಶುದ್ಧ: ಪ್ರತಿನಿತ್ಯ ಮನುಷ್ಯ ತನ್ನ ಬದುಕಿನ ಜಂಜಾಟದಲ್ಲಿ ಉಂಟಾಗುವ ಮೈ ಮೇಲಿನ ಧೂಳಿನ ಕಲ್ಮಶಗಳನ್ನು ತೊಳೆಯಲು ಹೇಗೆ ಸ್ನಾನದ ಮೊರೆ ಹೋಗುತ್ತಾನೆ. ಅದೇ ರೀತಿಯಲ್ಲಿ ತನ್ನ ಅಂತರಂಗದ ಆತ್ಮದಲ್ಲಿ ಉಂಟಾಗುವ ಕಲ್ಮಶಗಳನ್ನು ತೊಡೆದು ಹಾಕಲು ದೇವರ ಸಾನಿಧ್ಯ ಹಾಗೂ ಪುರಾಣ ಪ್ರವಚನಗಳ ಅಧ್ಯಾತ್ಮಿಕ ಚಿಂತನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಂತರಂಗದಲ್ಲಿನ ಆತ್ಮವನ್ನು ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ ಎಂದರು.
ಸಾರ್ಥಕ: ಅಂತರಂಗ ಮತ್ತು ಬಹಿರಂಗದ ಪರಿಶುದ್ಧತೆ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಗೊಳ್ಳಲು ಅತ್ಯಂತ ಪ್ರೇರಕ ಶಕ್ತಿಯನ್ನು ನೀಡುತ್ತದೆ. ಇವುಗಳನ್ನು ಸಾಧಿಸಿದವರನ್ನು ನಾವು ಇಂದು ಸಿದ್ದಿಪುರುಷರೆಂದು ಗೌರವಿಸಿ, ಪೂಜಿಸಿ, ಆರಾಧಿಸುತ್ತಿದ್ದೇವೆ. ಆದ್ದರಿಂದ ಅಂತಹ ಗುರು ಹಿರಿಯರ ಆದರ್ಶಗಳ ಸದ್ಗುಣಗಳನ್ನು ನಾವುಗಳೆಲ್ಲರೂ ಮೈಗೂಡಿಕೊಂಡು ಬೆಳೆದಾಗ ಮಾತ್ರ ಇಂತಹ ಧಾರ್ಮಿಕ ಸಮಾರಂಭಗಳು ನಡೆದಿದ್ದು, ಸಾರ್ಥಕವಾಗುತ್ತದೆ ಎಂದರು.
ಎಚ್ಚರಿಕೆ: ಮಾಡಾಳು ನಿರಂಜನ ಪೀಠ ವಿರಕ್ತಮಠದ ಶ್ರೀರುದ್ರಮುನಿಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಮಾಜದ ಪರಿವರ್ತನೆಗೆ ಬಸವಾದಿ ಶರಣರು ಸೇರಿದಂತೆ ಅನೇಕ ಸಾಧುಸಂತರು ತಮ್ಮದೇ ವಿಶೇಷ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯರ ಜೀವನ ಆದರ್ಶಗಳ ಮೌಲ್ಯಗಳು ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿದ್ದು, ಅದರ ಸನ್ಮಾರ್ಗದಲ್ಲಿ ಸಮಾಜವನ್ನು ಮುನ್ನೆಡೆಸುವ ಮಹಾತ್ಕಾರ್ಯಗಳನ್ನು ಇಂದಿನ ಮಠಮಾನ್ಯಗಳು ಮಾಡುತ್ತಿವೆ. ಇವುಗಳ ಮಹತ್ವವನ್ನು ತಿಳಿಯದ ಹಲವರು ಸನಾತನ ಸಂಸ್ಕತಿಯ ಮಠಮಾನ್ಯಗಳನ್ನು ನಿಯಂತ್ರಿಸುವ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡುವ ವಿಫಲ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಹುಬ್ಬಳ್ಳಿಯ ಉಪನ್ಯಾಸಕಿ ನಿರ್ಮಲ ಅಪ್ಪಣ್ಣಶೆಟ್ಟಿ ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಮಾಡಾಳು ಶ್ರೀಗುರುಶಿವಬಸವ ಕುಮಾರಾಶ್ರಮದ ಶ್ರೀತೋಂಟದಾರ್ಯ ಸ್ವಾಮೀಜಿ ಇದ್ದರು.
ಉಪ್ಪಿನಬೆಟಗೇರಿಯ ಪುರಾಣ ವಾಚಕ ದ ಕುಮಾರ ವಿರೂಪಾಕ್ಷಸ್ವಾಮೀಜಿ, ತಬಲಾ ವಾದಕರಾದ ಭಗವಂತಪ್ಪ ಹೂಗಾರ್, ಸಂಗೀತಗಾರ ರಾಮಲಿಂಗಯ್ಯ ತಂಡ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧಾರ್ಮಿಕ ಸಮಾರಂಭದ ನಂತರ ಭಕ್ತರಿಗೆ ಆಶ್ರಮದಲ್ಲಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.