ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಕ್ಕರ್: ಉಪನ್ಯಾಸಕರಿಗೆ ತಕ್ಕ ಶಾಸ್ತಿ

Rashmi Kasaragodu
Updated On : 31 Dec 2013, 1:51 am

ಕ.ಪ್ರ. ವಾರ್ತೆ ಟಿ ಮೈಸೂರು ಟಿ ಡಿ.30                                                                       ಸಹಿ ಮಾಡಿದ ನಂತರ ತರಗತಿಗೆ ಹಾಜರಾಗದೇ ಚಕ್ಕರ್ ಹಾಕುವ ಅಧ್ಯಾಪಕರ ಮೇಲೆ ಕಣ್ಗಾವಲಿಗೆ ಮೈಸೂರು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ.
ಕುಲಪತಿ  ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಶಿಕ್ಷಣ ಮಂಡಳಿಯ ಸಭೆಯ ಕಾರ್ಯಸೂಚಿ ಮುಕ್ತಾಯವಾದ ನಂತರ ಅನೌಪಚಾರಿಕವಾಗಿ ಈ ಬಗ್ಗೆ ಚರ್ಚಿಸಲಾಯಿತು.
ಕೆಲವು ಅಧ್ಯಾಪಕರು ವಿಭಾಗಗಳಿಗೆ ಬಂದು, ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ ನಂತರ ತರಗತಿ ತೆಗೆದುಕೊಳ್ಳುತ್ತಿಲ್ಲ ಮಾತ್ರವಲ್ಲ, ಸಂಬಂಧಪಟ್ಟ ವಿಭಾಗದಲ್ಲೂ ಇರುತ್ತಿಲ್ಲ ಎಂಬ ದೂರುಗಳಿವೆ. ಇದನ್ನು ನಿಯಂತ್ರಿಸದ ಹೊರತು ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರೊ. ರಂಗಪ್ಪ  ಹೇಳಿದಾಗ, ಬಹುತೇಕ ಸದಸ್ಯರು ದನಿಗೂಡಿಸಿದರು.
ಶೇ.15 ಮಂದಿಯಿಂದಲೇ ತೊಂದರೆ: ಶೇ.85 ರಷ್ಟು ಅಧ್ಯಾಪಕರು ಸರಿ ಇದ್ದಾರೆ. ಶೇ.15 ರಷ್ಟು ಮಂದಿ ಮಾಡುವ ಕೃತ್ಯಗಳಿಂದ ಇತರರ ಬಗ್ಗೆಯೂ ಅನುಮಾನಪಡುವಂತಾಗಿದೆ. ಬಯೋವುಟ್ರಿಕ್ ಹಾಜರಾತಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ಪ್ರತಿ ವಿಭಾಗಗಳಲ್ಲೂ ಸಿಸಿಟಿವಿ ಅಳವಡಿಸಬೇಕು. ಆಗ ಅಧ್ಯಾಪಕ ಅನಿವಾರ್ಯವಾಗಿ ಅಲ್ಲಿಯೇ ಉಳಿಯಬೇಕಾಗುತ್ತದೆ. ಹೊರಗೆ ಹೋದರೆ ಸಿಸಿಟಿವಿಯಲ್ಲಿ ದಾಖಲಾಗುತ್ತದೆ. ಅಧ್ಯಾಪಕರು ವಿಭಾಗಗಳಲ್ಲೇ ಇದ್ದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು, ಸಲಹೆ- ಸೂಚನೆ ನೀಡಲು, ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಆನ್ಲೈನ್ನಲ್ಲಿ ದೂರು ನೀಡಿ: ಪ್ರತಿ ವಿಭಾಗದಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅಧ್ಯಾಪಕರ ಬಗ್ಗೆ ಮಾಹಿತಿ ಪಡೆಯಬೇಕು. ವಿದ್ಯಾರ್ಥಿ  ಆಂತರಿಕ ಅಂಕಗಳು ಇರುವುದರಿಂದ ಅಧ್ಯಾಪಕರ ವಿರುದ್ಧ ನೇರವಾಗಿ  ದೂರು ಹೇಳಲು ಭಯವಾದರೆ ಆನ್ಲೈನ್ ಮೂಲಕ ತಿಳಿಸುವ ವ್ಯವಸ್ಥೆ ಮಾಡಬೇಕು. ಪಾಠ ಮಾಡದ ಅಧ್ಯಾಪಕರಿಗೆ ನೋಟಿಸ್, ವೇತನ ಕಡಿತ ಮತ್ತಿತರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯೂ ಬಂದಿತು.
ಇದಕ್ಕೂ ಮೊದಲು ಅಧ್ಯಾಪಕರ ಸಭೆ ಕರೆದು, ವಿವಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವಿವರಿಸುವುದಾಗಿ ಕುಲಪತಿ ಪ್ರೊ. ರಂಗಪ್ಪ, ಕುಲಸಚಿವ ಪ್ರೊ.  ಸಿ. ಬಸವರಾಜು ಹೇಳಿದರು.
ಕೆಲವು ಅಧ್ಯಾಪಕರು ನಿಗದಿತ ಪಠ್ಯಕ್ರಮ ಪೂರೈಸುತ್ತಿಲ್ಲ. ಬದಲಿಗೆ ತಾವು ಪ್ರಶ್ನೆಪತ್ರಿಕೆಯಲ್ಲಿ ನೀಡುವ ಅಧ್ಯಾಯಗಳನ್ನು ಮಾತ್ರ ಬೋಧಿಸುತ್ತಾರೆ. ಆಂತರಿಕ ಅಂಕಗಳನ್ನು ನೀಡುವಾಗ 20ಕ್ಕೆ ಎಲ್ಲರಿಗೂ 18 ನೀಡುತ್ತಾರೆ. ಇದೇ ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನಿಸಿದರು. ಈ ಬಗ್ಗೆಯೂ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಪಿಎಚ್.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕನ್ನಡದಲ್ಲಿ ಪ್ರಶ್ನೆಗಳು ಇರಲಿಲ್ಲ ಎಂದು ಅಭ್ಯರ್ಥಿಗಳ ಪ್ರತಿಭಟಿಸಿದ್ದರು. ಯುಜಿಸಿ ನಿಯಮಾವಳಿಯ ಪ್ರಕಾರ, ಪಿಎಚ್.ಡಿ ಪ್ರಬಂಧ ಇಂಗ್ಲಿಷ್ನಲ್ಲಿಯೇ ಇರಬೇಕು. ಕನ್ನಡದಲ್ಲಿ ಇರುವಂತಿಲ್ಲ. ಇದನ್ನು ಅಬ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪ್ರೊ. ರಂಗಪ್ಪ ಹೇಳಿದರು.
ವಿವಿಯ ಕೆಲವೊಂದು ಹುದ್ದೆಗಳಿಗೆ ನಿವೃತ್ತರನ್ನು ಮರು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಒಬ್ಬರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಮರು ನೇಮಕ ವಾಪಸ್ ಪಡೆಯಲಾಗಿತ್ತು. ಕಳೆದ 32 ವರ್ಷಗಳಿಂದ ಅಧ್ಯಾಪಕೇತರರ ನೇರ ನೇಮಕಾತಿ ಆಗಿಲ್ಲ. ಇದರಿಂದ ಅನುಭವ ಇರುವ ಸಿಬ್ಬಂದಿ ಕೊರತೆ ಕಾಡುತ್ತಿದೆ.
ಹೀಗಾಗಿ ಕಿರಿಯರನ್ನು ತರಬೇತಿಗೊಳಿಸಲು ಹಿರಿಯರ ಮರು ನೇಮಕ ಅಗತ್ಯ ಎಂಬ ಹಿನ್ನೆಲೆಯಲ್ಲಿ ನಿಯಮಾವಳಿ ರೂಪಿಸಲಾಗಿದೆ. ಈಗಾಗಲೇ ಸಿಂಡಿಕೇಟ್ ಹಾಗೂ ಹಣಕಾಸು ಸಮಿತಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಮಂಡಳಿಯು ಸಹ ನಿಯಮಾವಳಿಗೆ ಸಮ್ಮತಿಸಿ ಸೂಚಿಸಿತು.
ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್, ಸಾವಯವ ರಾಸಾಯನಶಾಸ್ತ್ರ, ಮಾಲಿಕುಲರ್ ಸಸ್ಯಶಾಸ್ತ್ರ, ಕಾನೂನು ಶಾಲೆ, ಸಾರ್ವಜನಿಕ ಆಡಳಿತ ವಿಭಾಗಗಳ ಆರಂಭಕ್ಕೆ ರೂಪಿಸಿರುವ ನಿಯಮಾವಳಿ,   ಬಿಬಿಎಂ 6ನೇ ಸೆಮಿಸ್ಟರ್ ಫೈನಾನ್ಸಿಯಲ್ ಸರ್ವೀಸಸ್, ಡಿಸಿಷನ್ ಮಾಡಲ್ಸ್ ಪತ್ರಿಕೆಗಳ ವಿಶೇಷ ಮರು ಮೌಲ್ಯಮಾಪನ ನಡೆಸಲು, ಪ್ರೊ. ಶಶಿಕಲಾ ಪುಟ್ಟರಾಜ್ ನಗದು ಬಹುಮಾನ ಷರತ್ತಿನ ತಿದ್ದುಪಡಿಗೆ, ವತ್ಸಲಾ ಬಿ.ಎನ್. ಗರುಡಾಚಾರ್ ನಗದು ಬಹುಮಾನ ದತ್ತಿ ಸ್ಥಾಪಿಸಲು  ಸಭೆ ಅನುಮೋದನೆ ನೀಡಿತು.
ಪರೀಕ್ಷಾಂಗ ಕುಲಸಚಿವ ಪ್ರೊ. ಜಯದೇವರಾಜ ಅರಸ್, ಶಾಸಕ ಸಿ. ಪುಟ್ಟರಂಗಶೆಟ್ಟಿ, ಪ್ರೊ. ಎಂ. ಚಂದ್ರಕುಮಾರ್, ಪ್ರೊ. ಸಿ. ಕೃಷ್ಣ,. ಪ್ರೊ. ಲಿಂಗರಾಜ ಗಾಂಧಿ, ಪ್ರೊ. ನಾಗಭೂಷಣ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನಲ್ಸನ್ ಮಂಡೇಲಾ, ಮೈಸೂರು  ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಸಭೆಯಲ್ಲಿ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement