ಮಡಿವಾಳ ಸಮಾವೇಶಕ್ಕೆ ಬೇಲೂರಿನಿಂದ ಸಾವಿರ ಜನ
ಕ.ಪ್ರ.ವಾರ್ತೆ ಬೇಲೂರು ಡಿ. 30
ಬೆಂಗಳೂರಿನಲ್ಲಿ ಜ. 5ರಂದು ನಡೆಯಲಿರುವ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶಕ್ಕೆ ಬೇಲೂರಿನಿಂದ 1 ಸಾವಿರಕ್ಕೂ ಹೆಚ್ಚು ಮಡಿವಾಳ ಬಂಧುಗಳು ತೆರಳಲಿದ್ದಾರೆ ಎಂದು ತಾಲೂಕು ಮಡಿವಾಳರ ಸಂಘದ ಗೌರವಾಧ್ಯಕ್ಷ ಡಿ. ನಾಗೇಶ್ ತಿಳಿಸಿದರು.
ಪಟ್ಟಣದ ಶ್ರೀ ಸೌಮ್ಯಕೇಶವ ಕನ್ವೆಷನ್ ಹಾಲ್ ಆವರಣದಲ್ಲಿ ಇತ್ತೀಚೆಗೆ ನಡೆದ ಮಡಿವಾಳರ ಸಭೆಯಲ್ಲಿ ಮಾತನಾಡಿದ ಅವರು, ಮಡಿವಾಳರ ಜನಾಂಗವು ಸಂಘಟನೆ ಆಗಬೇಕು ಸಮಾಜದಲ್ಲಿ ನಮ್ಮ ಕುಲಬಾಂಧವರಿಗೆ ಸಿಗಬೇಕಾಗ ಸವಲತ್ತುಗಳನ್ನು ಸರ್ಕಾರದಿಂದ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗೆ ಮನವಿ: ಕೇವಲ ಸಂಘಟನೆ ಮಾಡಿಕೊಂಡು ಹೋಗುವುದು ಎಂದೇ ಅಲ್ಲ ನಮ್ಮ ಹಲವಾರು ಬೇಡಿಕೆಗಳನ್ನು ಸರ್ಕಾರದಿಂದ ಪಡೆಯಲು ಹೋರಾಡಬೇಕು. ರಾಜ್ಯದಲ್ಲಿ ಎಲ್ಲಾ ಸಮಾಜದವರಿಗೂ ಸ್ಥಾನಮಾನವನ್ನು ನೀಡಲಾಗಿದೆ. ಆದರೆ, ನಮ್ಮ ಮಡಿವಾಳರ ಸಮಾಜಕ್ಕೆ ಇಲ್ಲಿಯವರೆಗೆ ಮಾನ್ಯತೆ ಸಿಕ್ಕಿಲ್ಲ. ಆದ್ದರಿಂದ ಜ.5 ರಂದು ನಡೆಯಲಿರುವ ಮಡಿವಾಳರ ಸಮಾವೇಶಕ್ಕೆ ತಾಲೂಕಿನ ಮಡಿವಾಳ ಸಮಾಜದ ಬಂಧುಗಳು ಭಾಗವಹಿಸಬೇಕು ಹಾಗೂ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಯವರ ಹತ್ತಿರ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಾಧಿಕಾರ ರಚನೆಗೆ ಒತ್ತಾಯ: ಪ್ರಮುಖ ಬೇಡಿಕೆಗಳಾದ ಮಡಿವಾಳ ಜನಾಂಗವನ್ನು ರಾಷ್ಟ್ರದ ಇತರೆ 17 ರಾಜ್ಯಗಳಲ್ಲಿ ಪರಿಶಿಷ್ಟರ ಜಾತಿಗೆ ಸೇರಿಸುವಂತೆ ಮತ್ತು ನಮ್ಮ ಜನಾಂಗದ ಕುಲಗುರು ಶ್ರೀ ಮಡಿವಾಳ ಮಾಚಿದೇವರ ಜನ್ಮ ದಿನವನ್ನು ಪರಿಗಣಿಸಿ ಮಾಚಿದೇವ ಜಯಂತಿ ಎಂದು ಘೋಷಿಸಬೇಕು ಮತ್ತು ಮಾಚಿದೇವರ ಜನ್ಮಸ್ಥಳವಾದ ಬಿಜಾಪುರ ಜಿಲ್ಲೆ ದೇವರ ಹಿಪ್ಪೆಯನ್ನು ಅಭಿವೃದ್ಧಿಪಡಿಸಿ ಮಾಚಿದೇವ ಪ್ರಾಧಿಕಾರ ರಚನೆಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸೌಲಭ್ಯಕ್ಕಾಗಿ ಮನವಿ: ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇತರೆ ಜನಾಂಗಕ್ಕೆ ಇರುವಂತೆ ನಮ್ಮ ಜನಾಂಗಕ್ಕೂ ಸ್ವಾಮೀಜಿಗಳಿದ್ದಾರೆ. ನಮ್ಮ ಕುಲಗುರುಗಳಾದ ಮಚ್ಚಿದೇವರ ಭಾವಚಿತ್ರ ಹಾಗೂ ನಮ್ಮ ಜನಾಂಗದ ಸ್ವಾಮೀಜಿಯವರ ಭಾವಚಿತ್ರವನ್ನು ಹಾಕಿಸಬೇಕು. ಬೃಹತ್ ಸಮಾವೇಶದಲ್ಲಿ ನಮ್ಮ ಜನಾಂಗದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಹಾಗೂ ನಮ್ಮ ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಇನ್ನು ಇತರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಬೇಕು ಎಂದರು.
ಮನವಿ: ಶೀಘ್ರದಲ್ಲಿ ನಮ್ಮ ಜಿಲ್ಲಾದ್ಯಂತ ನಮ್ಮ ಜನಾಂಗದವರನ್ನು ಒಟ್ಟುಗೂಡಿಸಿ ಜನಾಂಗದ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಶಾಸಕರಲ್ಲಿ ಮನವಿ ಮಾಡಲಾಗುವುದು ಎಂದರು.
ತಾಲೂಕು ಅಧ್ಯಕ್ಷ ತಾರೇಶ್, ಮಡಿವಾಳ ಸಂಘದ ಮುಖಂಡರಾದ ತಮ್ಮಣ್ಣಶೆಟ್ಟಿ, ಸೋಮಶೇಖರ್, ಚಂದ್ರಶೇಖರ್, ವೀರಭದ್ರಶೆಟ್ಟಿ, ಬಸವಶೆಟ್ಟಿ ಇದ್ದರು.