ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರಿಗೆ ಬಡ್ಡಿರಹಿತ ಮರುಸಾಲ ನೀಡಿ

Rashmi Kasaragodu
Updated On : 31 Dec 2013, 1:50 am


ಕ.ಪ್ರ.ವಾರ್ತೆ    ಹಾಸನ    ಡಿ. 30
ಬರಪೀಡಿತ ಪ್ರದೇಶದ ರೈತರಿಗೆ ಸರ್ಕಾರ ಬಡ್ಡಿ ರಹಿತ ಮರು ಸಾಲವನ್ನು ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪೀಡಿತ ಪ್ರದೇಶದಲ್ಲಿ ರೈತರು ಕಂಗಾಲಾಗಿದ್ದು, ಇದರಿಂದ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರ ನೆರವಿಗೆ ನಿಲ್ಲಬೇಕಿದೆ. ರೈತರಿಗೆ ಬಡ್ಡಿ ರಹಿತ ಮರು ಸಾಲವನ್ನು ನೀಡಬೇಕು ಎಂದರು.
ನೀರು, ಮೇವಿಗೆ ಒತ್ತಾಯ: ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯೇ ಎಲ್ಲೆಡೆ ತಲೆದೋರಿದ್ದು, ಈ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು.
ಜಿಲ್ಲೆಯಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಸರ್ಕಾರ ಕುಡಿಯುವ ನೀರು, ಜಾನುವಾರುಗಳಿಗೆ ಮೇವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಜೊತೆಗೆ ವಿದ್ಯುತ್ನ ಸಮಸ್ಯೆ ತಲೆದೋರಿದ್ದು, ಕುಡಿಯುವ ನೀರಿಗೂ ಸಹ ವಿದ್ಯುತ್ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಖಾತೆಯನ್ನು ಹೊಂದಿರುವುದರಿಂದ ಗ್ರಾಮೀಣ ಭಾಗದಲ್ಲಿ ಯಾವ ಸಂದರ್ಭದಲ್ಲಿ ವಿದ್ಯುತ್ ನೀಡಬೇಕು ಎಂಬುದನ್ನು ಅರಿತು ನೀಡಬೇಕು.
ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರಿಗೆ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು ಎಂದರು.
ಹಣ ಬಂದಿಲ್ಲ: ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಆಡಳಿತ ಪಕ್ಷದವರು ಜಿಲ್ಲೆಗೆ ರು. 400 ಕೋಟಿ ಬಂದಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗೆ ರು. 400 ಕೋಟಿ ಗಳ ಅನುದಾನ ಬಂದಿದ್ದರೆ ತೋರಿಸಲಿ. ಹಿಂದೆ ಬಿಜೆಪಿ ಸರ್ಕಾರದ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಜಿಲ್ಲೆಗೆ ಬಂದ ಅನುದಾನ ಬಿಟ್ಟರೆ ಹೊಸ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದರು.
ಖಾತ್ರಿ ಹಣ ಲೂಟಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅರ್ಹರಿಗೆ ಉಪಯೋಗವಾಗದೆ ಹಣ ಅನ್ಯರ ಪಾಲಾಗುತ್ತಿದ್ದು, ಹಣವನ್ನು ಲೂಟಿ ಮಾಡಲಾಗುತ್ತಿದೆ.
ಉದ್ಯೋಗ ಖಾತರಿಯಲ್ಲಿ ದುಡ್ಡು ಹೊಡೆಯುವ ಯೋಜನೆ ಬಿಟ್ಟರೆ ಅರ್ಹ ಫಲಾನುವಭವಿಗಳಿಗೆ ಅನುಕೂಲವಾಗುತ್ತಿಲ್ಲ. ಆದ್ದರಿಂದ ಈ ಯೋಜನೆಯಲ್ಲಿ ಕೆಲಮೊಂದು ಮಾರ್ಪಾಡುಗಳನ್ನು ತರಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ರು. 1 ಲಕ್ಷ ಕೋಟಿ ಬಜೆಟ್ ಮಂಡಿಸಿಕೊಂಡು ಹಣ ಬಿಡುಗಡೆ ಮಾಡದಿದ್ದರೆ ಪ್ರಯೋಜನವಾಗುವುದಿಲ್ಲ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ನಾನಾ ಯೋಜನೆಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಅನುದಾನ ಸರಿಯಾಗಿ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಲಿದೆ. ವರ್ಷದಲ್ಲಿ ನಡೆಸಬೇಕಾದ ಕಾಮಗಾರಿಗಳಿಗೆ ಬಂದ ಅನುದಾನ ವಾಪಸ್ ಹೋಗಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಇದ್ದರು.


ಜೀಪ್ಗೆ ಬೆಂಕಿ ಹಚ್ಚಿ ಅಂತ ಹೇಳಿಲ್ಲ: ರೇವಣ್ಣ ಸ್ಪಷ್ಟನೆ


ಅಕ್ರಮ ಮರ ಲಾರಿಗಳನ್ನು ತಡೆಯಲು ಮುಂದಾದಂತಹ ತಹಸೀಲ್ದಾರ್ ಜೀಪ್ಗೆ ಬೆಂಕಿ ಹಚ್ಚಿ ಅಂತ ನಾನು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ರೇವಣ್ಣ ಅವರು, ಯಾವುದೇ ಕಾರಣಕ್ಕೂ ನಾನು ಹಿಡಿದ ಅಕ್ರಮ ಮರಳು ಲಾರಿಗಳನ್ನು ಬಿಟ್ಟು ಬಿಡಿ ಅಂತ ಅಧಿಕಾರಗಳ ಮೇಲೆ ಒತ್ತಡ ಹಾಕಿಲ್ಲ. ಚನ್ನರಾಯಪಟ್ಟಣದಲ್ಲಿ ತಹಸೀಲ್ದಾರ್ ಮರಳು ಲಾರಿಗಳನ್ನು ಹಿಡಿದು ದಂಡವನ್ನು ಸರಿಯಾಗಿ ವಿಧಿಸದೇ ಬಿಟ್ಟು ಬಿಟ್ಟಿದ್ದರು. ಆಗ ಸರಿಯಾಗಿ ದಂಡ ವಿಧಿಸುವಂತೆ ಹೇಳಿದೆ ಅಷ್ಟೇ.
ಕಳೆದ 6 ತಿಂಗಳಿಂದ ಲೋಕೋಪಯೋಗಿ ಇಲಾಖೆಯಿಂದ ಮರಳನ್ನು ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಜಿಲ್ಲಾಡಳಿತ ಮರಳು ನೀಡದ ಕಾರಣ ಅಕ್ರಮವಾಗಿ ಮರಳು ಸಾಗಣೆದಾರರ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಮರಳು ನೀಡುವಂತಾಗಬೇಕು ಎಂದರು.


28 ಕ್ಷೇತ್ರದಲ್ಲಿ ಸ್ಪರ್ಧೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಈ ಬಗ್ಗೆ ಪಕ್ಷದ ರಾಷ್ಟ್ರೀಯ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಚ್.ಡಿ.ರೇವಣ್ಣ ಇದೇ ಸಂದರ್ಭದಲ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement